ದೆಹಲಿ ಮಾದರಿಯಲ್ಲಿ ರಾಜ್ಯಾಭಿವೃದ್ಧಿಗೆ ಪಣ : ಮುಖ್ಯಮಂತ್ರಿ ಚಂದ್ರು

ಬೀದರ್: ಜು.28:ಡಿಸೆಂಬರ್‍ನಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲಾಗುವುದು. 130 ಕ್ಕೂ ಹೆಚ್ಚು ಸೀಟ್ ಗಳಲ್ಲಿ ಗೆಲುವು ಸಾಧಿಸುವ ಭರವಸೆ ಇದೆ ಎಂದು ಪಕ್ಷದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ನುಡಿದರು.

ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಆಮ್ ಆದ್ಮಿ ಪಕ್ಷ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದೆ. ಈಗಾಗಲೇ ದೆಹಲಿಯಲ್ಲಿ ಉಚಿತ ಆರೋಗ್ಯ, ಶಿಕ್ಷಣ, ವಿದ್ಯುತ್, ರಸ್ತೆ, ನೀರು ಮತ್ತು ಮಹಿಳಾ ಸಬಲೀಕರಣ ಸೇವೆ ನೀಡಲಾಗಿದೆ. ಮಾಡಿ ತೋರಿಸಿದ್ದನ್ನು ಹೇಳಿಕೊಂಡು ಪಂಜಾಬ್ ನಲ್ಲಿ ಅಧಿಕಾರಕ್ಕೆ ಬರಲಾಗಿದೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಜಲನೀತಿ, ಶಿಕ್ಷಣ ನೀತಿ ಮತ್ತು ಉದ್ಯೋಗ ನೀತಿಗೆ ಒತ್ತುಕೊಟ್ಟು ರಾಜಕೀಯ, ಸಮಾಜ ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರಲಾಗುವುದು. ಅಪರಾಧ ರಹಿತ, ಕುಟುಂಬ ರಹಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಜನರು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷ ಹೊರತು ಪಡಿಸಿ ಆಮ್ ಆದ್ಮಿ ಪಕ್ಷಕ್ಕೆ ಪರ್ಯಾಯ ಮತದಾನ ಮಾಡಬೇಕಾದ ಅವಶ್ಯಕತೆ ಇದೆ ಎಂದರಲ್ಲದೆ ಪಕ್ಷದ ಜೊತೆಗೆ ಐಎಎಸ್, ಐಪಿಎಸ್ ಹಾಗೂ ಇನ್ನಿತರ ಮುಖಂಡರು ಸಂಪರ್ಕದಲ್ಲಿದ್ದಾರೆ. ಪಕ್ಷ ಅಧಿಕಾರಕ್ಕೆ ತಂದು ನಿಜವಾದ ಸರ್ವಜನಾಂಗದ ಶಾಂತಿಯ ತೋಟ ನಿರ್ಮಿಸಲಾಗುವುದು ಎಂದರು.

ಜೆಸಿಬಿ ಪಕ್ಷಗಳು ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿ ರಾಜಕೀಯವನ್ನು ಹೊಲಸು ಮಾಡಿವೆ. ನಮ್ಮ ಪೆÇರಕೆ ಮೂಲಕ ಸ್ವಚ್ಛಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಚಂದ್ರು ಇದೇ ವೇಳೆ ಪ್ರತಿಪಾದಿಸಿದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮಾ ಮಾತನಾಡಿ ಅನಗತ್ಯ ಖರ್ಚಿಲ್ಲದೆ ಶಾಸಕನಾಗುವುದು ಆಮ್ ಆದ್ಮಿ ಪಕ್ಷದಲ್ಲಿ ಮಾತ್ರ. ಹೀಗಾಗಿಯೇ ದೆಹಲಿಯಲ್ಲಿ ಅಭಿವೃದ್ಧಿಗೆ ಜನ ಆಶೀರ್ವಾದ ಮಾಡಿದ್ದಾರೆ. ಶೂನ್ಯ ಪ್ರತಿಶತ ಭ್ರಷ್ಟಾಚಾರದ ಗುರಿ ಹೊಂದಿರುವ ಪಕ್ಷ ಜನಕಲ್ಯಾಣದ ಗುರಿ ಹೊಂದಿದೆ. ಹಣಬಲ ತೋಳ್ಬಲ ಜಾತಿಬಲ ನಂಬದೆ ಜನಸೇವೆ ಮಾಡುವ ಆತ್ಮಬಲ ಹೊಂದಿದವರಿಗೆ ಮಣೆ ಹಾಕಲಾಗುವುದು. ಅಸ್ಸಾಂ, ಪಂಜಾಬ್, ಹರಿಯಾಣ, ಗುಜರಾತ್‍ಗಳಲ್ಲಿ ಈಗಾಗಲೇ ಆಮ್ ಆದ್ಮಿ ಪಕ್ಷ ತನ್ನ ಖಾತೆ ತೆರೆದಿದೆ. ರಾಜ್ಯದಲ್ಲಿ ಅಧಿಕಾರ ಹಿಡಿದು ಸ್ವಚ್ಛ ಮತ್ತು ಪರಿಶುದ್ಧ ಆಡಳಿತ ನೀಡುವ ಗುರಿ ಹೊಂದಲಾಗಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ದೀಪಕ ಮಾಲಗಾರ, ಮುಖಂಡರಾದ ಸಿದ್ದು ಫುಲಾರಿ, ಸೇರಿದಂತೆ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.