ದೆಹಲಿ ಮಸೂದೆ, ವಿಶ್ವಾಸಮತಯಾಚನೆ: ಕೇಂದ್ರಕ್ಕೆ ವೈಎಸ್ ಆರ್ ಕಾಂಗ್ರೆಸ್ ಬೆಂಬಲ

ನವದೆಹಲಿ,ಜು.27-ದೆಹಲಿ ಸರ್ಕಾರದ ಸೇವೆಗಳ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ತರಲು ಮುಂದಾಗಿರುವ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಸರ್ಕಾರವನ್ನು ಬೆಂಬಲಿಸಲು ವೈಎಸ್‍ಆರ್ ಕಾಂಗ್ರೆಸ್ ನಿರ್ಧರಿಸಿದೆ,

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‍ಆರ್ ಕಾಂಗ್ರೆಸ್ ಪಕ್ಷ, ಮಣಿಪುರದ ಮೇಲಿನ ಅವಿಶ್ವಾಸ ನಿರ್ಣಯ ಸೇರಿದಂತೆ ಎರಡು ದೊಡ್ಡ ಮತಗಳಲ್ಲಿ ಸಂಸತ್ತಿನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬೆಂಬಲಿಸಲು ಮುಂದಾಗಿದೆ.

ರಾಜ್ಯಸಭೆಯಲ್ಲಿ ಒಂಬತ್ತು ಮತ್ತು ಲೋಕಸಭೆಯಲ್ಲಿ 22 ಸದಸ್ಯರನ್ನು ಹೊಂದಿರುವ ವೈಎಸ್‍ಆರ್ ಕಾಂಗ್ರೆಸ್ ಪಕ್ಷ ನಿರ್ಣಾಯಕ ಮಸೂದೆಗಳಲ್ಲಿ ಆಗಾಗ್ಗೆ ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತದೆ.

ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಸದಸ್ಯರ ಬೆಂಬಲದೊಂದಿಗೆ, ಸರ್ಕಾರ ಬಹುಮತವನ್ನು ಹೊಂದಿರದ ರಾಜ್ಯಸಭೆಯ ಮೂಲಕ ತನ್ನ ವಿವಾದಾತ್ಮಕ ದೆಹಲಿ ಮಸೂದೆಯನ್ನು ಸುಲಭವಾಗಿ ಅಂಗೀಕಾರ ಪಡೆದುಕೊಳ್ಳಲು ಮುಂದಾಗಿದೆ.

ಈ ಮಸೂದೆಯು ದೆಹಲಿಯ ಅಧಿಕಾರಶಾಹಿಗಳ ನಿಯಂತ್ರಣಕ್ಕಾಗಿ ಸುಗ್ರೀವಾಜ್ಞೆಯಾಗಿದೆ. ದೆಹಲಿಯಲ್ಲಿನ ಚುನಾಯಿತ ಸರ್ಕಾರ ಅಧಿಕಾರಶಾಹಿಗಳ ವರ್ಗಾವಣೆ ಮತ್ತು ನೇಮಕಾತಿಗಳ ಮೇಲೆ ನಿಯಂತ್ರಣ ಹೊಂದಿದೆ ಎಂದು ಹೇಳುವ ಸುಪ್ರೀಂ ಕೋರ್ಟ್ ಆದೇಶವನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ಈ ಮಸೂದೆ ತರುತ್ತಿದೆ.

“ನಾವು ಎರಡೂ ವಿಷಯಗಳಲ್ಲಿ ಸರ್ಕಾರದ ಪರವಾಗಿ ಮತ ಚಲಾಯಿಸುತ್ತೇವೆ” ಎಂದು ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ನಾಯಕ ವಿ ವಿಜಯಸಾಯಿ ರೆಡ್ಡಿ ತಿಳಿಸಿದ್ದಾರೆ.

ಪಕ್ಷದ 22 ಸಂಸದರು ಮಣಿಪುರ ಬಿಕ್ಕಟ್ಟಿನ ಕುರಿತು ಲೋಕಸಭೆಯಲ್ಲಿ ಪ್ರತಿಪಕ್ಷದ ಅವಿಶ್ವಾಸ ಮತದ ಮೇಲೆ ಸರ್ಕಾರದ ಪರವಾಗಿ ಮತ ಚಲಾಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.