ದೆಹಲಿ ಪ್ರತಿಭಟನೆ: ಕೂಡ್ಲಿಗಿ ರೈತಸಂಘದಿಂದ ಬೆಂಬಲ

ಕೂಡ್ಲಿಗಿ.ಜ.9:- ದೆಹಲಿಯಲ್ಲಿ ರೈತರಿಗೆ ಮಾರಕವಾಗುವ ಕಾನೂನುಗಳನ್ನು ವಾಪಸ್ಸು ಪಡೆಯುವಂತೆ ಒತ್ತಾಯಿಸಿ 45 ದಿನಗಳಿಂದ ಮಾಡುತ್ತಿರುವ ಹೋರಾಟಕ್ಕೆ ಕೂಡ್ಲಿಗಿಯ ಪ್ರಾಂತ್ಯರೈತ ಸಂಘ ಹಾಗೂ ಸೆಂಟರ ಆಪ್ ಟ್ರೇಡ್ ಯೂನಿಯನ್ ಬೆಂಬಲಿಸಿ ಶುಕ್ರವಾರ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಗುನ್ನಳ್ಳಿ ರಾಘವೇಂದ್ರ ಮಾತನಾಡಿ ನಮ್ಮ ದೇಶದ ರೈತರನ್ನು ಕಾರ್ಪೂರೇಟ್ ಕಂಪನಿಗಳ ಗುಲಾಮರನ್ನಾಗಿಸುವ ಹುನ್ನಾರವನ್ನು ಕೇಂದ್ರಸರ್ಕಾರ ಮಾಡುತ್ತಿದ್ದು ಇದಕ್ಕಾಗಿಯೇ ಎಪಿಎಂಸಿ ತಿದ್ದುಪಡೆ ಕಾಯ್ದೆ, ಭೂಸ್ವಾಧೀನ ಅಧಿನಿಯಮ ತಿದ್ದುಪಡಿ, ವಿದ್ಯುಚ್ಛಕ್ತಿ, ಅಗತ್ಯವಸ್ತುಗಳ ತಿದ್ದುಪಡೆ ಕಾಯ್ದೆ ಗಳನ್ನು ಜಾರಿ ತರುವ ಮೂಲಕ ರೈತರನ್ನು ಜನಸಾಮಾನ್ಯರಿಗೆ ಅಕ್ಷರಶಃ ಬೀದಿಗೆ ತಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. ರೈತರಷ್ಟಲ್ಲದೇ ಎಲ್ಲಾ ರೀತಿಯ ಕಾರ್ಮಿಕರ ಭವಿಷ್ಯಕ್ಕೆ ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿ ಕಾನೂನುಗಳು ಮಾರಕವಾಗಲಿದ್ದು ಈ ಕೂಡಲೇ ರೈತ, ಕಾರ್ಮಿಕ ವಿರೋಧಿ ಕಾನೂನುಗಳನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿದರು.
ಸಿ.ಐ.ಟಿ.ಯು ಮುಖಂಡ ಸಿ.ವಿರುಪಾಕ್ಷಿ ಮಾತನಾಡಿ ರೈತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ದೇಶದ ಸಾಮಾನ್ಯ ಜನತೆಯ ಬದುಕಿಗೆ ಭರವಸೆ ತುಂಬುವ ಬದಲು ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿದ್ದು ಐನೂರಕ್ಕೂ ಹೆಚ್ಚು ಪ್ರಗತಿಪರ, ರೈತ,ಕಾರ್ಮಿಕಪರ ಸಂಘಟನೆಗಳು ದೇಶದಲ್ಲಿ ಬಂದ್ ಮುಷ್ಕರ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ತನ್ನ ಕಾರ್ಪೂರೇಟ್ ನೀತಿಯನ್ನು ಮುಂದುವರೆಸುತ್ತಿರುವುದು ಖಂಡನೀಯ ಎಂದರು. ಈ ಸಂದರ್ಭದಲ್ಲಿ ಕೆ.ಮಾಲಿಂಗ, ಬಿ.ರಫಿ,ಮಹದೇವಪ್ಪ, ಹಂಪಣ್ಣ, ಬಿ.ಮರುಳಸಿದ್ದಚಾರಿ ಸೇರಿದಂತೆ ಹಲವಾರು ಕಾರ್ಮಿಕರು ಹಾಜರಿದ್ದರು.