ದೆಹಲಿ ಉಪ ಮುಖ್ಯಮಂತ್ರಿ ಸಿಸೋಡಿಯಾ ಬಂಧನದ ಮೂಲಕ ಸಿಬಿಐ ದುರ್ಬಳಕೆ: ಕೇಂದ್ರದ ವಿರುದ್ಧ ಇನಾಮದಾರ್ ಕಿಡಿ

ಕಲಬುರಗಿ :ಮಾ.01:ದೆಹಲಿಯ ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನಿಷ್ ಸಿಸೋಡಿಯಾ ಅವರನ್ನು ಬಂಧಿಸುವ ಮೂಲಕ ಕೇಂದ್ರ ಸರ್ಕಾರವು ಸಿಬಿಐಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ಮಾಜಿ ಉಪ ಮೇಯರ್ ಸೈಯದ್ ಸಜ್ಜಾದ್ ಅಲಿ ಇನಾಮದಾರ್ ಅವರು ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಸೋಡಿಯಾ ಬಂಧನವನ್ನು ಬಲವಾಗಿ ಖಂಡಿಸುತ್ತೇವೆ. ದೇಶಾದ್ಯಂತ ಆಮ್ ಆದ್ಮಿ ಪಕ್ಷವು ಬೆಳೆಯುವುದನ್ನು ಕಂಡು ಹೆದರಿರುವ ಬಿಜೆಪಿಯು ಇಂತಹ ಬಂಧನದ ಕ್ರಮವನ್ನು ವಾಮ ಮಾರ್ಗದಲ್ಲಿ ಕೈಗೊಂಡಿದೆ ಎಂದು ದೂರಿದರು.
ದೆಹಲಿಯ ಅಬಕಾರಿ ನೀತಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ನೂತನ ಅಬಕಾರಿ ನೀತಿಯನ್ನೂ ದೆಹಲಿಯಲ್ಲಿ ಇನ್ನೂ ಜಾರಿಗೆ ತಂದಿಲ್ಲ. ಹಾಗೂ ಹಲವು ರಾಜ್ಯಗಳಲ್ಲಿ ಇದೇ ನೀತಿ ಜಾರಿಯಲ್ಲಿದೆ. ಸುಮಾರು ಒಂದು ವರ್ಷದಿಂದ ಕೇಂದ್ರ ಸರ್ಕಾರದ ತನಿಖಾಧಿಕಾರಿಗಳು ಸಿಬಿಐ, ಇಡಿ ಮೂಲಕ ಸಿಸೋಡಿಯಾ ಅವರನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡುತ್ತಿದ್ದರೂ ಆರೋಪವನ್ನು ಸಾಬೀತುಪಡಿಸುವ ಯಾವುದೇ ಒಂದು ಚಿಕ್ಕ ಪುಟ್ಟ ಸಾಕ್ಷಿ ಸಿಕ್ಕಿಲ್ಲ. ನಗದು ಅಥವಾ ಯಾವುದೇ ಅಕ್ರಮ ದಾಖಲೆ ಪತ್ತೆ ಹಚ್ಚಲು ಸಿಬಿಐಯಿಂದ ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.
ಆಮ್ ಆದ್ಮಿ ಪಕ್ಷವೊಂದೇ ಬಿಜೆಪಿಯನ್ನು ಎದುರಿಸುವ ಏಕೈಕ ಶಕ್ತಿಯಾಗಿ ಹೊರಹೊಮ್ಮುತ್ತಿರುವುದು ಸಹಿಸಲಾಗದೇ ಬಿಜೆಪಿ ರಾಜಕೀಯವಾಗಿ ತನ್ನ ಅಧಿಕಾರವನ್ನು ಪಕ್ಷದ ವಿರುದ್ಧ ಬಳಕೆ ಮಾಡಿಕೊಳ್ಳುತ್ತಿದೆ. ಅದಕ್ಕಾಗಿ ಇಂತಹ ತೊಂದರೆಗಳನ್ನು ಕೊಡುತ್ತಿದೆ ಎಂದು ಅವರು ದೂರಿದರು.
ಕರ್ನಾಟಕ ಸೇರಿದಂತೆ ದೇಶಾದ್ಯಂತ ಆಮ್ ಆದ್ಮಿ ಪಕ್ಷವು ಪ್ರವರ್ಧಮಾನಕ್ಕೆ ಬರುತ್ತಿದೆ. ಇದನ್ನು ಸಹಿಸಿಕೊಳ್ಳಲು ಬಿಜೆಪಿಗೆ ಆಗುತ್ತಿಲ್ಲ. ಕರ್ನಾಟಕದ ಚುನಾವಣೆ ಪ್ರಚಾರಕ್ಕೆ ಮನಿಶ್ ಸಿಸೋಡಿಯಾ ಅವರು ಆಗಮಿಸಿ ಇಲ್ಲಿನ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಪ್ರಶ್ನಿಸಬಹುದು ಎಂಬ ಭಯದಿಂದ ಕೇಂದ್ರ ಸರ್ಕಾರವು ಸಿಬಿಐ ಮೂಲಕ ಅವರನ್ನು ಬಂಧಿಸಿದೆ. ದೇಶ ಹಾಗೂ ಜನರಿಗೋಸ್ಕರ ಕೇವಲ ಬಂಧನ ಮಾತ್ರವಲ್ಲ, ಪ್ರಾಣ ಬಿಡಲೂ ಸಹ ನಾವು ಸಿದ್ಧರಿದ್ದೇವೆ ಎಂದು ಅವರು ಗುಡುಗಿದರು.
ಆಮ್ ಆದ್ಮಿ ಪಕ್ಷದ ದೆಹಲಿ ಸರ್ಕಾರದ ಶಿಕ್ಷಣ ಕ್ರಾಂತಿಯನ್ನು ಕಂಡು ಅನೇಕ ವಿದೇಶಗಳೂ ಸಹ ಮೆಚ್ಚುಗೆ ವ್ಯಕ್ತಪಡಿಸಿವೆ. ಆದಾಗ್ಯೂ, ಬಿಜೆಪಿಯವರಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಶಿಕ್ಷಣ ಸಚಿವರಾಗಿ ಮನಿಶ್ ಸಿಸೋಡಿಯಾ ಅವರು ಬರೋಬ್ಬರಿ 25000ಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ಅತ್ಯಾಧುನಿಕವಾಗಿ ನಿರ್ಮಿಸಿ, ಸುಮಾರು 20 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ. ಇಂತಹವರ ವಿರುದ್ಧ ಬಿಜೆಪಿಯು ಇಂತಹ ಕೀಳು ಮಟ್ಟದ ಕುತಂತ್ರ ಮಾಡುತ್ತಿದೆ ಎಂದು ಖಂಡಿಸಿದ ಅವರು, ಗಿಡವು ಚಿವುಟಿದಷ್ಟು ಚಿಗುರುವಂತೆ ಆಮ್ ಆದ್ಮಿ ಪಕ್ಷವು ಇನ್ನೂ ಹೆಚ್ಚಿನ ವೇಗದಲ್ಲಿ ಬೆಳೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಸಿದ್ದು ಪಾಟೀಲ್ ತೆಗನೂರ್, ಗುಲಾಂ ರಸೂಲ್ ಮುಂತಾದವರು ಉಪಸ್ಥಿತರಿದ್ದರು.