ದೆಹಲಿ ಅಗ್ನಿ ಅವಘಡ ಕಟ್ಟಡ ಮಾಲೀಕರ ಬಂಧನ

ನವದೆಹಲಿ,ಮೇ ೧೪- ರಾಜಧಾನಿ ದೆಹಲಿಯ ಕಟ್ಟಡದಲ್ಲಿ ನಿನ್ನೆ ಸಂಭವಿಸಿದ ಭೀಕರ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರಾದ ಹರೀಶ್‌ಗೋಯಲ್ ಮತ್ತು ಆತನ ಸಹೋದರ ವರುಣ್ ಗೋಯಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಅವಘಡ ಸಂಭವಿಸುತ್ತಿದ್ದಂತೆ ಕಟ್ಟಡದ ಮಾಲೀಕರು ಪರಾರಿಯಾಗಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಏರ್‌ಕಂಡೀಷನ್ ಸ್ಫೋಟದಿಂದಾಗಿ ಈ ಭೀಕರ ಅವಘಡ ಸಂಭವಿಸಿರಬಹುದು ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇನ್ನೂ ನಿಖರ ಮಾಹಿತಿ ಲಭ್ಯವಾಗಿಲ್ಲ. ತನಿಖೆಯಿಂದಷ್ಟೆ ಮಾಹಿತಿ ಲಭ್ಯವಾಗಲಿದೆ.
ಮುಂಡ್ಕಾ ಮೆಟ್ರೊ ನಿಲ್ದಾಣದ ಬಳಿಯಿರುವ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ ೨೭ ಮಂದಿ ಸಜೀವ ದಹನವಾಗಿದ್ದರು.
ಘಟನೆಯಲ್ಲಿ ೧೨ ಮಂದಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಸಂಜಯ್‌ಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಯಲ್ಲಿ ೬೦ ರಿಂದ ೭೦ ಮಂದಿಯನ್ನು ಪಾರು ಮಾಡಲಾಗಿದೆ. ಈಗ ಕಟ್ಟಡದಲ್ಲಿ ಬೆಂಕಿ ನಂದಿಸಲಾಗಿದ್ದು, ಮೃತದೇಹಗಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ಮುಂದುವರೆಸಿದ್ದಾರೆ.
ಘಟನೆಯ ಬಗ್ಗೆ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್, ಪ್ರಧಾನಿ ನರೇಂದ್ರಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಗ್ನಿ ದುರಂತದಲ್ಲಿ ೨೪ ಮಹಿಳೆಯರು ಸೇರಿದಂತೆ, ೨೫ ಮಂದಿ ನಾಪತ್ತೆಯಾಗಿದ್ದಾರೆ. ಕಟ್ಟಡದ ಮುಂಭಾಗ ನಿಂತಿರುವ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಇವರೆಲ್ಲರ ಹುಡುಕಾಟಕ್ಕೆ ಕಾರ್ಯಾಚರಣೆ ಮುಂದುವರೆದಿದೆ.