
ದಾವಣಗೆರೆ. ಏ.೩೦; ಮಹಿಳಾ ಕುಸ್ತಿಪಟು ಗಳ ಹೋರಾಟಕ್ಕೆ ಬೆಂಬಲಿಸಿ ಎ ಐ ಎಂ ಎಸ್ ಎಸ್ ಹಾಗೂ ಎಐಡಿ ವೈ ಓ ಸಂಘಟನೆಗಳ ಪದಾಧಿಕಾರಿಗಳು ನಗರದ ಗಾಂಧಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಎಎಂಎಸ್ಎಸ್ ನ ಜಿಲ್ಲಾ ಕಾರ್ಯದರ್ಶಿ ಹಾಗೂ ಈ ಬಾರಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪಕ್ಷದ ವತಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಕಾಮ್ರೆಡ್ ಭಾರತಿ. ಕೆ ಮಾತನಾಡಿ “ ನಮ್ಮ ದೇಶದ ಕೀರ್ತಿ ಪತಾಕೆಯನ್ನು ದೇಶದ ಉದ್ದಗಲಕ್ಕೂ ಹರಡಿ ಹಾಗೂ ವಿಶ್ವಖ್ಯಾತಿಗೆ ಪಾತ್ರರಾದ ಮಹಿಳಾ ಕುಸ್ತಿಪಟುಗಳು ಕಳೆದ ಆರು ದಿನಗಳಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಡಬ್ಲ್ಯೂ ಎಫ್ ಐ ನ ಅಧ್ಯಕ್ಷ ಹಾಗೂ ಬಿಜೆಪಿ ಸಂಸದರಾದ ಬ್ರೆಜ್ಭೂಷಣ್ ಶರಣ್ ಸಿಂಗ್ ಇವರ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇದ್ಯಾವುದೂ ತಿಳಿದಿಲ್ಲ ಎಂಬಂತೆ ನಮ್ಮ ಸರ್ಕಾರ ದಿವ್ಯಮೌನ ವಹಿಸಿದೆ. ಸರ್ಕಾರದ ಈ ನಡೆಯನ್ನು ನಾವೆಲ್ಲ ವಿರೋಧಿಸಬೇಕು. ಕೇಂದ್ರ ಸರ್ಕಾರದ ಘೋಷಣೆಯಾದ ಬೇಟಿ ಬಚಾವೋ ಎಂದರೆ ಇದೇನಾ? ಇಲ್ಲಿ ಮಹಿಳೆಗೆ ರಕ್ಷಣೆ ಇಲ್ಲವೇ? ಕಳೆದ ಒಂದು ವರ್ಷದ ಹಿಂದೆ ಈ ಸುದ್ದಿ ಹೊರ ಬಿದ್ದಾಗ ತನಿಖೆ ನಡೆಸುತ್ತೇವೆ, ನ್ಯಾಯ ಒದಗಿಸುತ್ತೇವೆ ಎಂದವರು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.ಇದು ಹೆಣ್ಣು ಮಕ್ಕಳ ಮೇಲೆ ಇವರಿಗಿರುವ ಕಾಳಜಿ ತೋರಿಸುತ್ತದೆ. ಪ್ರತಿಭಟನೆ ನಡೆದು ಐದು ಆರು ದಿನಗಳಾದ ಮೇಲೆ ಎಫ್ ಐ ಆರ್ ದಾಖಲು ಮಾಡಲು ಸುಪ್ರೀಂ ಕೋರ್ಟ್ ಹೇಳಿದೆ. ಅನ್ಯಾಯದ ವಿರುದ್ಧ ಕೇವಲ ಎಫ್ ಐಆರ್ ದಾಖಲು ಮಾಡಿದರೆ ಸಾಕೆ? ಈಗಾಗಲೇ ಕುಸ್ತಿಪಟ್ಟುಗಳು ಕುಟುಂಬಸ್ಥರ ಮೇಲೆ ಬೆದರಿಕೆ ಕರೆಗಳು, ಮುಂದಿನ ಹೋರಾಟಕ್ಕೆ ಕಳಿಸಬಾರದು ಎಂದು ಎದುರಿಸುತ್ತಿದ್ದಾರೆ. ಕೆಲ ಗೊಂಡಾಗಳು ತಮ್ಮ ತೋಳ್ಬಲ ಪ್ರದರ್ಶನವನ್ನು ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಆರೋಪಿಯನ್ನು ತಕ್ಷಣ ಬಂಧಿಸಿ ಆರೋಪಿ ಎಂಥ ಸ್ಥಾನದಲ್ಲಿದ್ದರು ಸರಿ ಅವರನ್ನು ಕೂಡಲೇ ವಜಾ ಗೊಳಿಸಬೇಕು ಹಾಗೂ ಶೀಘ್ರವಾಗಿ ನ್ಯಾಯ ಒದಗಿಸಬೇಕು. ಇನ್ನು ಮುಂದೆ ಇಂತಹ ಯಾವುದೇ ಘಟನೆ ಜರುಗದಂತೆ ನೋಡಿಕೊಳ್ಳಬೇಕು ಇಲ್ಲವಾದರೆ ಕಾನೂನಿನ ಮೇಲೆ ಜನಗಳಿಗೆ ಯಾವುದೇ ನಂಬಿಕೆ ಉಳಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರ ಜೊತೆಗೆ ಹೋರಾಟ ನಿರತ ಮಹಿಳಾ ಕುಸ್ತಿಪಟುಗಳೊಂದಿಗೆ ನಾವಿದ್ದೇವೆ ಯಾವುದೇ ಅಡೆತಡೆಯನ್ನು ಲೆಕ್ಕಿಸದೆ ನ್ಯಾಯಯುತ ಹೋರಾಟಕ್ಕೆ ಮುನ್ನಡೆಯಿರಿ ಈ ಪ್ರತಿಭಟನೆಯ ಮೂಲಕ ಹೋರಾಟ ನಿರತ ಮಹಿಳಾ ಕುಸ್ತಿಪಟ್ಟುಗಳಿಗೆ ಕರೆ ನೀಡಿದರು.