
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಸಚಿವ ನಾಗೇಂದ್ರ ಜಿಲ್ಲೆಯ ಶಾಸಕರ ನಡುವಿನ ಒಗ್ಗಟ್ಟಿನ ಬಗ್ಗೆ ಮಾತನಾಡಿರುವುದಕ್ಕೆ ದೆಹಲಿ ನಾಯಕರ ಎಚ್ಚರಿಕೆಯ ಗಂಟೆಯೇ ಕಾರಣ ಎನ್ನಲಾಗುತ್ತಿದೆ.
ಜಿಲ್ಲಾಧಿಕಾರಿ ಹುದ್ದೆಗೆ ಟಿ.ವೆಂಕಟೇಶ್ ಅವರ ನೇಮಕದ ವಿಚಾರದಲ್ಲಿ ಜಿಲ್ಲೆಯ ಶಾಸಕರ ಮಧ್ಯೆ ಉಂಟಾದ ಭಿನ್ನಾಭಿಪ್ರಾಯದ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು ದೆಹಲಿಗೆ ಮುಟ್ಟಿದೆ.
ಅದಕ್ಕಾಗಿ ಇತ್ತೀಚೆಗೆ ದೆಹಲಿಯ ನಾಯಕರಾದ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಸಮಾಧಾನಕ್ಕೆ ಎಡೆಇಲ್ಲದಂತೆ ನಡೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರಂತೆ.
ಅದಕ್ಕಾಗಿ ನಿನ್ನೆಯ ಗೃಹಜ್ಯೋತಿ ಉದ್ಘಾಟನಾ ಸಮಾರಂಭದಲ್ಲಿ ನಾವೆಲ್ಲ ಒಗ್ಗಟ್ಟಾಗಿದ್ದೇವೆಂದು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಲು ಕಾರಣ ಎನ್ನಲಾಗುತ್ತಿದೆ.
ದೆಹಲಿ ಸಭೆಯಲ್ಲಿ ಸಚಿವರು ಶಾಸಕರ ನಡುವೆ ಸಮನ್ವಯತೆ ಕೊರತೆ ಚರ್ಚೆಯಾದ ಬಗ್ಗೆ ಸ್ವತಃ ಸಚಿವ ನಾಗೇಂದ್ರ ನಿನ್ನೆ ಸಂಜೆ ಮಾಧ್ಯಮಗಳ ಮುಂದೆ ಉಲ್ಲೇಖಿಸಿದ್ದಾರೆ.
ರಾಜ್ಯದ ಎಲ್ಲಾ ಸಚಿವರಿಗೆ ಲೋಕ ಸಭೆ ಚುನಾವಣೆಯ ಗೆಲಿವಿನ ಪರೀಕ್ಷೆ ಇಟ್ಟಿದ್ದಾರೆ 28 ಕ್ಕೆ 28 ಕ್ಷೇತ್ರ ಗೆಲ್ಲವ ಟಾಸ್ಕ್ ಕೊಟ್ಟಿದ್ದಾರೆ. ಅಯಾ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಿಗೆ ಇದು ಪರೀಕ್ಷೆ.
ಉಸ್ತುವಾರಿ ಸಚಿವರು ಮಾತ್ರವಲ್ಲ ಎಲ್ಲ ಶಾಸಕರು ಜವಾಬ್ದಾರಿ ಇದೆ. ಪಕ್ಷ ತೀರ್ಮಾನ ಮಾಡಿದ ಅಭ್ಯರ್ಥಿ ಗೆಲ್ಲಿಸಬೇಕು. ಯಾವುದೇ ಭಿನ್ನಾಭಿಪ್ರಾಯಗಳು ಇರಬಾರದು ಎಂದು ಸೂಚನೆ ನೀಡಿದ್ದಾರಂತೆ.
ಅದಕ್ಕಾಗಿ ಸಚಿವರು ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎನ್ನುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರಂತೆ.