ದೆಹಲಿಯಲ್ಲಿ ಹದಗೆಟ್ಟ ವಾಯುಮಾಲಿನ್ಯ ಶಾಲೆಗಳಿಗೆ ರಜೆ

ನವದೆಹಲಿ, ನ. ೧೭- ರಾಜಧಾನಿ ದೆಹಲಿಯಲ್ಲಿ ಕಳಪೆ ವಾಯುಮಾಲಿನ್ಯ ಗುಣಮಟ್ಟ ೪ನೇ ದಿನವಾದ ಇಂದು ಮುಂದುವರೆದಿದೆ. ನಿನ್ನೆ ವಾಯುಮಾಲಿನ್ಯ ಪ್ರಮಾಣ ೩೭೯ ರಷ್ಟಿತ್ತು. ಇಂದು ೩೯೬ಕ್ಕೇರಿಕೆಯಾಗಿದೆ ಎಂದು ವಾಯು ಗುಣಮಟ್ಟ ಮತ್ತು ಹವಾಮಾನ ಸಂಶೋಧನಾ ಸಂಸ್ಥೆ ತಿಳಿಸಿದೆ.
ವಾಯುಮಾಲಿನ್ಯ ಗುಣಮಟ್ಟ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಿರ್ಮಾಣ ಕಾರ್ಯಗಳು, ಶಾಲೆಗಳು, ಆಫೀಸ್‌ಗಳಿಗೆ ರಜೆ ಘೋಷಿಸಲಾಗಿದೆ.
ಮುಂದಿನ ಆದೇಶದವರೆಗೂ ದೆಹಲಿ, ಎನ್‌ಸಿಆರ್‌ನಲ್ಲಿ ಶಾಲಾ-ಕಾಲೇಜು,ಇತರ ಶೈಕ್ಷಣಿಕ ಸಂಸ್ಥೆಗಳನ್ನು ಬಂದ್ ಮಾಡುವಂತೆ ವಾಯು ಗುಣಮಟ್ಟ ಸಮಿತಿ ಆದೇಶ ನೀಡಿದ್ದು, ಆನ್‌ಲೈನ್ ತರಗತಿಗಳಿಗೆ ಆದ್ಯತೆ ನೀಡುವಂತೆ ಸೂಚಿಸಿದೆ.
ದೆಹಲಿಯ ೩೦೦ ಕಿ.ಮೀ ವ್ಯಾಪ್ತಿಯಲ್ಲಿರುವ ೧೧ ಶಾಖೋತ್ಪನ್ನ ವಿದ್ಯುತ್ ಘಟಕಗಳ ಪೈಕಿ ಕೇವಲ೫ ಸ್ಥಾವರಗಳು ಮಾತ್ರ ಕಾರ್ಯನಿರ್ವಹಿಸುತ್ತಿದೆ.
ವಾಯುಮಾಲಿನ್ಯ ಹತೋಟಿಗೆ ತರುವ ನಿಟ್ಟಿನಲ್ಲಿ ದೆಹಲಿ ಮತ್ತು ಎನ್‌ಸಿಆರ್ ವ್ಯಾಪ್ತಿಯ ರಾಜ್ಯಗಳಿಗೆ ಈ ತಿಂಗಳ ೨೯ ರವರೆಗೆ ಯಾವುದೇ ಕಟ್ಟಡ ಕಾಮಗಾರಿ ನಡೆಸದಂತೆ ಸೂಚನೆ ನೀಡಲಾಗಿದ್ದು, ಬಸ್, ರೈಲು, ಮೆಟ್ರೋ ಮತ್ತು ಸೇನೆಗೆ ಸಂಬಂಧಿಸಿದ ಸಂಚಾರಗಳನ್ನು ಕಠಿಣ ನಿಯಮಾವಳಿಗಳನ್ವಯ ನಡೆಸುವಂತೆ ತಿಳಿಸಿದೆ.
ಅಗತ್ಯ ವಸ್ತುಗಳಲ್ಲದ ಸರಕು ಸಾಗಾಣೆ ಟ್ರಕ್‌ಗಳಿಗೆ ಭಾನುವಾರದವರೆಗೆ ದೆಹಲಿ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ದೆಹಲಿ ಎನ್‌ಸಿಆರ್ ವ್ಯಾಪ್ತಿಯ ರಾಜ್ಯಗಳಾದ ಹರಿಯಾಣ, ಉತ್ತರ ಪ್ರದೇಶ, ರಾಜಸ್ತಾನ ರಾಜ್ಯಉನ್ನತ ಸಭೆ ನಡೆಸಿ ವಾಯುಮಾಲಿನ್ಯ ಹದಗೆಟ್ಟಿರುವ ಬಗ್ಗೆ ಚರ್ಚೆ ನಡೆಸಿ ವಾಯುಮಾಲಿನ್ಯವನ್ನು ತಡೆಗಟ್ಟುವ ಕುರಿತು ಕ್ರಮಕೈಗೊಳ್ಳಲು ಮುಂದಾಗಿದೆ.
ಎನ್‌ಸಿಆರ್ ವಲಯದ ರಾಜ್ಯಸರ್ಕಾರಗಳ ಶೇ. ೫೦ ರಷ್ಟು ನೌಕರರಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ. ಖಾಸಗಿ ಸಂಸ್ಥೆಗಳಿಗೂ ಇದೇ ನಿಯಮ ಅನ್ವಯವಾಗಲಿದೆ. ಯಾವುದೇ ಅನುಮತಿ ಇಲ್ಲದೆ ತೈಲ ಬಳಕೆ ಮಾಡುತ್ತಿರುವ ಕೈಗಾರಿಕೆಗಳನ್ನು ತಕ್ಷಣ ಬಂದ್ ಮಾಡಿ ೧೦ ರಿಂದ ೧೫ ವರ್ಷ ಹಳೆಯ ಡೀಸಲ್ ಮತ್ತು ಪೆಟ್ರೋಲ್ ವಾಹನಗಳು ರಸ್ತೆಗಿಳಿಯದಂತೆ ನಿಗಾವಹಿಸಲು ನಿರ್ದೇಶಿಸಲಾಗಿದೆ.