ದೆಹಲಿಯಲ್ಲಿ ಹದಗೆಟ್ಟ ವಾತಾವರಣ

ನವದೆಹಲಿ, ನ.೭- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನೇ ದಿನೇ ವಾತಾವರಣ ಹದಗೆಡುತ್ತಿದೆ. ಇದರ ನಡುವೆ ನಗರದ ವಾಯು ಗುಣಮಟ್ಟ ಸೂಚ್ಯಂಕ ೩೨೬ರಲ್ಲಿ ನಿಂತಿದ್ದು ಎಚ್ಚರಿಕೆಯ ಸಂದೇಶ ನೀಡಿದೆ.
ಇಂದು ಬೆಳಗ್ಗೆ ಕಡಿಮೆಯಾಗಿ ವಾಯುಗುಣಮಟ್ಟ ಕಳಪೆಯಾಗಿದೆ. ಕಳೆದ ವಾರದ ಗಂಭೀರ ಸ್ಥಿತಿಯಿಂದ ಈಗ ಕಳಪೆ ಗುಣಮಟ್ಟಕ್ಕೆ ಬಂದಿದೆ ಎಂದು ಹವಾಮಾನ ವ್ಯವಸ್ಥೆಯನ್ನು ಸೂಚಿಸುವ ಸಫರ್(ಎಸ್‌ಎಎಫ್‌ಎಆರ್) ಹೇಳಿದೆ.
ಗರಿಷ್ಠ ಮಾಲಿನ್ಯ ಮಟ್ಟದಿಂದ ತೀವ್ರ ಕಳಪೆ ಗುಣಮಟ್ಟಕ್ಕೆ ದೆಹಲಿ ಮಾಲಿನ್ಯ ಸ್ಥಿತಿ ಬಂದಿದ್ದು ಒಟ್ಟಾರೆ ನಗರದ ವಾಯು ಗುಣಮಟ್ಟ ಸೂಚ್ಯಂಕ ೩೨೬ರಲ್ಲಿ ನಿಂತಿದ್ದು ಎಚ್ಚರಿಕೆಯ ಸಂದೇಶ ನೀಡಿದೆ. ಇನ್ನು ರಾಜಧಾನಿ ಪ್ರದೇಶ ನೊಯ್ಡಾದಲ್ಲಿ ಎಕ್ಯುಐ ೩೫೬ರಲ್ಲಿ ನಿಂತಿದ್ದು ಅದು ಕೂಡ ತೀರಾ ಕಳಪೆ ಮಟ್ಟದ್ದಾಗಿದೆ. ಅದೇ ರೀತಿ, ಗುರುಗ್ರಾಮ್ ನಲ್ಲಿ ಎಕ್ಯುಐ ೩೬೪ರಷ್ಟು ಇದೆ.
ದೆಹಲಿಯಲ್ಲಿನ ವಾಯು ಗುಣಮಟ್ಟ ಮುನ್ಸೂಚನೆ ವ್ಯವಸ್ಥೆ ಬಿಡುಗಡೆ ಮಾಡಿರುವ ಅಂಕಿಅಂಶ ಪ್ರಕಾರ, ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯ ಗುಣಮಟ್ಟ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ. ನವೆಂಬರ್ ೮ ಮತ್ತು ೯ರಂದು ತೀರಾ ಕಳಪೆ ಮಟ್ಟದಲ್ಲಿರಲಿದೆ ಎಂದು ಬಿಡುಗಡೆ ಮಾಡಿರುವ ಹವಾಮಾನ ಮುನ್ಸೂಚನೆ ಪ್ರಕಟಣೆ ತಿಳಿಸಿದೆ.
ಸಫರ್ ಪ್ರಕಾರ, ಸೊನ್ನೆಯಿಂದ ೧೦೦ ರವರೆಗೆ ವಾಯು ಗುಣಮಟ್ಟ ಸೂಚ್ಯಂಕ ಇದ್ದರೆ ಉತ್ತಮ, ೧೦೦ ರಿಂದ ೨೦೦ ಇದ್ದರೆ ಸಾಧಾರಣ, ೨೦೦ರಿಂದ ೩೦೦ ಇದ್ದರೆ ಕಳಪೆ, ೩೦೦ ರಿಂದ ೪೦೦ ಇದ್ದರೆ ತೀರಾ ಕಳಪೆ ಮತ್ತು ೪೦೦ರಿಂದ ೫೦೦ ಇದ್ದರೆ ಗಂಭೀರ ಪರಿಸ್ಥಿತಿ ಎಂದು ಪರಿಗಣಿಸಲಾಗುತ್ತದೆ.