ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ

ನವದೆಹಲಿ, ಏ. ೧೭- ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ವಾರಾಂತ್ಯದ ಕರ್ಫ್ಯೂ ಹೇರಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲ ರೀತಿಯ ಮಾರುಕಟ್ಟೆಗಳು, ಮಾಲ್‌ಗಳು, ಹೋಟೆಲ್‌ಗಳು, ರೆಸ್ಟೋರೆಂಟ್ ಗಳು, ಸ್ಪಾಗಳಿಗೆ ನಿಬಂರ್ಧವಿಧಿಸಲಾಗಿದ್ದು, ಸಾರ್ವಜನಿಕರು ಮನೆಯಲ್ಲೇ ಉಳಿಯುವಂತಾಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ.
ಜನರು ಮನೆಯಿಂದ ಹೊರಬರದ ಕಾರಣ ಪ್ರಮುಖ ಮಾರುಕಟ್ಟೆ ಪ್ರದೇಶಗಳಾದ ಕನಾಟ್ ಪ್ಲೇಸ್, ಕರೋಲ್ ಬಾಗ್, ಸರೋಜಿನಿ ಮಾರುಕಟ್ಟೆ, ನೆಹರು ಪ್ಲೇಸ್ ಸೇರಿದಂತೆ ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ಜನಸಂಚಾರವಿಲ್ಲದೆ ಬಣಗುಡುತ್ತಿದ್ದ ದೃಶ್ಯ ಕಂಡು ಬಂದಿತು.
ನಗರಾದ್ಯಂತ ಪೊಲೀಸ್ ಮತ್ತು ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದ್ದು, ಅನಗತ್ಯವಾಗಿ ಮನೆಯಿಂದ ಹೊರಬರುವ ವ್ಯಕ್ತಿಗಳನ್ನು ತಪಾಸಣೆ ನಡೆಸಿ ವಾಪಸ್ ಕಳುಹಿಸಿದರು.
ಇಂಡಿಯಾ ಗೇಟ್ ಬಳಿ ಜನ ಮತ್ತು ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಒಂದು ವಾರದಿಂದ ನಗರದಲ್ಲಿ ಸೋಂಕು ತಡೆಗೆ ರಾತ್ರಿ ಕರ್ಫ್ಯೂ ಹೇರಲಾಗಿತ್ತು. ದಿನ ದಿನೇ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಾರಾಂತ್ಯ ಕರ್ಫ್ಯೂ ವಿಧಿಸಿದ್ದಾರೆ.ನಾಳೆಯೂ ಹಗಲಿನಲ್ಲಿ ಕರ್ಫ್ಯೂ ಮುಂದುವರಿಯಲಿದೆ.
ಅಗತ್ಯ ಸೇವೆಗಳಾದ ಔಷಧಿ, ಕಿರಾಣಿ ಅಂಗಡಿಗಳ ಬಾಗಿಲು ಮಾತ್ರ ತೆರೆದಿದ್ದು, ತರಕಾರಿ, ಹಾಲು, ಮಾರಾಟಗಾರರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ.