ದೆಹಲಿಯಲ್ಲಿ ರೈತರ ಮೇಲೆ ಹಲ್ಲೆ ಖಂಡಿಸಿ ಅಣಕು ಶವಾಯಾತ್ರೆ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.23:- ದೆಹಲಿ ಚಲೋ ವೇಳೆ ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು ಸಿಡಿಸಿ ಓರ್ವ ರೈತನ ಸಾವಿಗೆ ಕಾರಣರಾದ ಪೆÇಲೀಸರು, ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಅಣಕು ಶವಯಾತ್ರೆ ನಡೆಸಲಾಯಿತು.
ನಗರದ ಗನ್‍ಹೌಸ್ ವೃತ್ತದಲ್ಲಿ ಜಮಾಯಿಸಿದ ರೈತರು ಸಂಸ್ಕೃತ ಪಾಠಶಾಲೆ ವೃತ್ತದವರೆಗೂ ಸಾಗಿ ವಾಪಸ್ ಗನ್‍ಹೌಸ್ ವತ್ತದವರೆಗೆ ಅಣಕು ಶವಯಾತ್ರೆ ನಡೆಸಿದರು. ಈ ವೇಳೆ ಶವದ ಪ್ರತಿಕೃತಿಯನ್ನು ಕಸಿದುಕೊಳ್ಳಲು ಪೆÇಲೀಸರು ಮುಂದಾದರು. ಇದರಿಂದ ರೈತರು, ಪೆÇಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಆದರೂ ಪೆÇಲೀಸರು ಶವದ ಪ್ರತಿಕೃತಿಯನ್ನು ತಮ್ಮ ವಶಕ್ಕೆ ಪಡೆದುಕೊಂಡರು.
ಈ ವೇಳೆ ಮಾತನಾಡಿದ ಕುರುಬೂರ್ ಶಾಂತಕುಮಾರ್, ದೆಹಲಿಯಲ್ಲಿ ರೈತರು ಭಿಕ್ಷೆ ಬೇಡುತ್ತಿಲ್ಲ. ಸರ್ಕಾರವೇ ನಿಗದಿ ಮಾಡುವ ಬೆಂಬಲ ಬೆಲೆ ಖಾತರಿ ಕಾನೂನು ಕೇಳುತ್ತಿದ್ದೇವೆ. ದೇಶದ ರೈತರನ್ನು ಕತ್ತಲಲ್ಲಿಟ್ಟಿದ್ದಾರೆ. ಸರ್ಕಾರವೇ ನಿಗದಿ ಮಾಡುವ ಬೆಲೆಗೆ ಶಾಸನಬದ್ಧ ಖಾತರಿ ನೀಡಬೇಕು ಎಂದು ಹೋರಾಟ ಮಾಡಿದರೆ ರೈತರ ಮೇಲೆ ಅಶ್ರುವಾಯು ಸಿಡಿಸಿ ರೈತರನ್ನು ಕೊಲೆ ಮಾಡುತ್ತಿದ್ದಾರೆ. ರೈತ ಹೋರಾಟಗಾರರನ್ನು ಭಯೋತ್ಪಾದಕರು, ದೇಶದ್ರೋಹಿಗಳು, ಖಲಿಸ್ತಾನಿಗಳು ಎಂದು ಹೇಳಿ ಅವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಕಿಡಿ ಕಾರಿದರು.
ರೈತರ ಸಾಲ ಸಂಪೂರ್ಣ ಮನ್ನಾ, ಸ್ವಾಮಿನಾಥನ್ ವರದಿಜಾರಿ, ಬೆಂಬಲ ಬೆಲೆ, ಡಬ್ಲ್ಯೂಟಿಓ ಒಪ್ಪಂದದಿಂದ ಭಾರತ ಸರ್ಕಾರ ಹೊರಗೆ ಬರಬೇಕು, ರೈತರಿಗೆ ಪಿಂಚಣಿ ನೀಡುವ ಯೋಜನೆ, ಫಸಲ್ ಭೀಮಾ ಬೆಳೆ ವಿಮೆ ಪದ್ಧತಿ ಬದಲಾಗಬೇಕು, ಕಳೆದ ವರ್ಷ ದೆಹಲಿ ರೈತ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ 750 ರೈತ ಕುಟುಂಬಕ್ಕೆ ನೆರವು ನೀಡಬೇಕು. ಕುಟುಂಬದ ಒಬ್ಬರಿಗೆ ನೌಕರಿ ನೀಡಬೇಕು ಎಂಬ ಬೇಡಿಕೆ ಮುಂದಿಡಲಾಗಿದೆ. ಆದರೆ, ಕೇಂದ್ರ ಸರ್ಕಾರ ರೈತ ಚಳವಳಿಯ ದಿಕ್ಕು ತಪ್ಪಿಸಲು ವಾಮ ಮಾರ್ಗ ಬಳಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಕೇಂದ್ರ ಸರ್ಕಾರ ರೈತರೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆ ನಡೆಸಿದೆ. ಮಾತುಕತೆ ನೆಪದಲ್ಲಿ ವಿಳಂಬ ಧೋರಣೆ ಅನುಸರಿಸುವುದನ್ನು ಬಿಟ್ಟು ಸಮಸ್ಯೆ ಬಗೆರಿಸಲಿ. ಪಂಜಾಬ್, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನದ ಲಕ್ಷಾಂತರ ರೈತರು ಶಾಂತಿಯುತವಾಗಿ ದೆಹಲಿ ಚಲೋ ನಡೆಸುತ್ತಿದ್ದಾರೆ ಸಮಸ್ಯೆ ಬಗೆಹರಿಯುವವರೆಗೂ ಚಳವಳಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ದೆಹಲಿ ಹೋರಾಟ ಬೆಂಬಲಿಸಿ ಫೆ.23ರಂದು ರಾಜ್ಯಾದ್ಯಂತ, ಜಿಲ್ಲಾಧಿಕಾರಿ ಕಚೇರಿ ಮುಂದೆ ವಿನೂತನ ಪ್ರತಿಭಟನೆ ಮಾಡಲಾಗುವುದು. ಲೋಕಸಭಾ ಸದಸ್ಯರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಮಾ.1ರಂದು ರಾಜ್ಯದ್ಯಂತ ರೈಲು ತಡೆ ಚಳುವಳಿ ನಡೆಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹತ್ತಳ್ಳಿ ದೇವರಾಜ್, ಪಿ.ಸೋಮಶೇಖರ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ, ವೆಂಕಟೇಶ್, ನೀಲಕಂಠಪ್ಪ, ಕುರುಬೂರು ಸಿದ್ದೇಶ್, ದೇವನೂರು ವಿಜೇಂದ್ರ, ನಂಜದೇವನಪುರ ಸತೀಶ್, ಹೆಗ್ಗೂರು ರಂಗರಾಜ್, ಕುರುಬೂರು ಪ್ರದೀಪ್, ಉಡಿಗಾಲ ಸುಂದರಪ್ಪ, ಕಾಟೂರು ಮಾದೇವಸ್ವಾಮಿ, ನಾಗೇಶ್, ಶ್ರೀಕಂಠ, ಪ್ರಸಾದ್ ನಾಯಕ್ ನಿಂಗರಾಜು, ಮಂಜುನಾಥ್, ಅಪ್ಪಣ್ಣ, ಕೋಟೆ ಸುನೀಲ್, ಬನ್ನೂರು ಸೂರಿ ಸೇರಿದಂತೆ ಹಲವರು ಭಾಗವಹಿಸಿದ್ದರು.