ದೆಹಲಿಯಲ್ಲಿ ಪಟಾಕಿ ನಿಷೇಧ ಹಸಿರು ಪೀಠ ಆದೇಶ


ನವದೆಹಲಿ. ನ. ೯- ಕೊರೊನಾ ಮತ್ತು ವಾಯುಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯ ಮಂಡಲಿ (ಎನ್‌ಜಿಟಿ) ಇಂದಿನಿಂದ ನವೆಂಬರ್ ೩೦ ರವರೆಗೆ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ. ಈ ಆದೇಶ ಅಧಿಕ ಮಾಲಿನ್ಯ ದಾಖಲಾಗಿರುವ ನಗರಗಳಿಗೂ ಅನ್ವಯವಾಗಲಿದೆ.
ಪಟಾಕಿ ನಿಷೇಧ ಕೋರಿ ಭಾರತೀಯ ಸಾಮಾಜಿಕ ನೆಟ್ ವರ್ಕ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಸಿರು ನ್ಯಾಂiiಪೀಠ ನ. ೫ ರಂದು ತೀರ್ಪುನ್ನು ಕಾಯ್ದಿರಿಸಿತ್ತು.
ಇಂದು ನ್ಯಾಯಮೂರ್ತಿ ಆದರ್ಶ ಕುಮಾರ್ ನೇತೃತ್ವದ ಹಸಿರು ನ್ಯಾಯ ಪೀಠ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿರುವುದಾಗಿ ತೀರ್ಪು ಪ್ರಕಟಿಸಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟು ಅತ್ಯಂತ ಕಳಪೆ ಪ್ರಮಾಣದಲ್ಲಿ ಹಾಗೂ ವಾಯುಮಾಲಿನ್ಯವೂ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿರುವ ರಾಷ್ಟ್ರದ ಇತರ ನಗರ ಮತ್ತು ಪಟ್ಟಣಗಳಿಗೂ ಈ ಆದೇಶ ಅನ್ವಯವಾಗಲಿದೆ ಎಂದು ಹಸಿರು ನ್ಯಾಯಪೀಠ ಸ್ಪಷ್ಟ ಪಡಿಸಿದೆ.
ಗಾಳಿಯ ಗುಣಮಟ್ಟ ಮಧ್ಯಮ ಅಥವಾ ಸಾಮಾನ್ಯ ಪ್ರಮಾಣದಲ್ಲಿರುವ ನಗರ ಪಟ್ಟಣಗಳಲ್ಲಿ ಹಸಿರು ಪಟಾಕಿಗಳು ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ.
ದೀಪಾವಳಿ, ಕ್ರಿಸ್‌ಮಸ್, ಹೊಸ ವರ್ಷಾಚರಣೆ ವೇಳೆ ಎರಡು ಗಂಟೆಗಳ ಕಾಲ ಪಟಾಕಿ ಸಿಡಿಸಲು ಅವಕಾಶ ನೀಡಿರುವ ಕುರಿತು ರಾಜ್ಯ ಸರ್ಕಾರಗಳು ಆದೇಶ ಹೊರಡಿಸಬಹುದು ಎಂದು ನ್ಯಾಯಪೀಠ ಹೇಳಿದೆ.
ದೇಶದಲ್ಲಿ ಮಾರಕ ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ವಾಯುಮಾಲಿನ್ಯ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕೆಂದು ಆದೇಶದಲ್ಲಿ ಹೇಳಲಾಗಿದೆ.