ದೆಹಲಿಯಲ್ಲಿ ದೂರು ದಾಖಲಿಸಲು ಯುವತಿಗೆ ಪೋಲಿಸ್ ಆಯುಕ್ತರ ಸೂಚನೆ

ಕಲಬುರಗಿ:ನ.27: ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರ ವಿರುದ್ಧದ ಕೇಳಿ ಬಂದ ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲ ಘಟನೆಗಳೂ ದೆಹಲಿಯಲ್ಲಿ ಆಗಿರುವುದರಿಂದ ದೆಹಲಿಯಲ್ಲಿಯೇ ದೂರು ಸಲ್ಲಿಸಲು ಸಂತ್ರಸ್ತ ಯುವತಿಗೆ ಸೂಚನೆ ನೀಡಿದ್ದಾಗಿ ನಗರ ಪೋಲಿಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ್ ಅವರು ಹೇಳಿದರು.
ಶನಿವಾರ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಯುವತಿಯು ತನ್ನ ಪೋಷಕರೊಂದಿಗೆ (ತಂದೆ, ತಾಯಿ) ಕಳೆದ ಮೂರು ದಿನಗಳ ಹಿಂದೆ ಬಂದು ಮದುವೆಯಾಗುವುದಾಗಿ ನಂಬಿಸಿ ನನಗೆ ವಂಚಿಸಿದ್ದಾರೆ ಎಂದು ಯುವತಿಯು ದೂರು ಸಲ್ಲಿಸಿದಳು ಹಾಗೂ ಎಲ್ಲ ಮಾಹಿತಿಯನ್ನು ನೀಡಿದರು. ಘಟನೆಗಳೆಲ್ಲವೂ ದೆಹಲಿಯಲ್ಲಿ ಆಗಿರುವುದರಿಂದ ಅಲ್ಲಿಯೇ ದೂರು ಸಲ್ಲಿಸಲು ತಿಳಿಸಿದ್ದಾಗಿ ಸ್ಪಷ್ಟಪಡಿಸಿದರು.
ದೆಹಲಿಯಲ್ಲಿಯೇ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿತು. ನಂತರ ಅವರ ವಸತಿ ನಿಲಯದಲ್ಲಿಯೇ ಜೊತೆಗೆ ಕಾಲ ಕಳೆದೆವು. ಮದುವೆಯ ಕುರಿತು ತನ್ನ ತಾಯಿಯು ಲೋಖಂಡೆ ಅವರೊಂದಿಗೆ ಮಾತನಾಡಿದ್ದರು. ಇಂಡಿಗೆ ಲೋಖಂಡೆಯವರು ವರ್ಗಾವಣೆಯಾದಾಗ ಸಂಪರ್ಕದಲ್ಲಿ ಕೊರತೆ ಉಂಟಾಯಿತು. ಇಂಡಿಯಲ್ಲಿಯೂ ಸಹ ನನ್ನ ತಂದೆ ಲೋಖಂಡೆ ಅವರ ತಂದೆಗೆ ಭೇಟಿಯಾಗಿ ಮದುವೆ ಕುರಿತು ಪ್ರಸ್ತಾಪಿಸಿದ್ದರು. ನಂತರ ಅವರ ತಂದೆಯೂ ಸಹ ಸರಿಯಾಗಿ ವರ್ತಿಸಲಿಲ್ಲ ಎಂಬ ಮಾಹಿತಿಯನ್ನು ಯುವತಿ ನೀಡಿದಳು ಎಂದು ಅವರು ವಿವರಿಸಿದರು.
ಇನ್ನು ಯುವತಿಯ ವಿರುದ್ಧ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ದೂರು ಸಲ್ಲಿಸಿದ್ದರ ಕುರಿತು ಪ್ರಸ್ತಾಪಿಸಿದ ಡಾ. ರವಿಕುಮಾರ್ ಅವರು, ಸೈಬರ್ ಕ್ರೈಂನಲ್ಲಿ ಅವರ ದೂರು ದಾಖಲಾಗಿದೆ. ಯುವತಿಯ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾಗಿವೆ. ನನಗೂ ಯುವತಿಗೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.