ದೆಹಲಿಯಲ್ಲಿ ತಂಪೆರೆದ ಮಳೆರಾಯ

ದೆಹಲಿ, ಮೇ.೨೯- ರಾಜಧಾನಿ ದೆಹಲಿಯ ಕೆಲವು ಭಾಗಗಳಲ್ಲಿ ಧೂಳು ಸಹಿತ ಬಿರುಗಾಳಿಯೊಂದಿಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಷ್ಟ್ರ ರಾಜಧಾನಿಯ ಕೆಲವೆಡೆ ಸೋಮವಾರ ಬೆಳಗಿನ ಜಾವ ಮಳೆ ಸುರಿದಿದ್ದು, ಬಿಸಿಲಿನ ತಾಪದಿಂದ ಬಳಲುತ್ತಿದ್ದ ರಾಜಧಾನಿಗೆ ಮುಕ್ತಿ ಸಿಕ್ಕಿದೆ.
ಘಾಜಿಯಾಬಾದ್‌ನ ಕೆಲ ರಸ್ತೆಯಲ್ಲಿ ಮಳೆಯ ಆರ್ಭಟಕ್ಕೆ ರಸ್ತೆ ಜಲಾವೃತವಾಗಿ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಸುತ್ತಮುತ್ತಲಿನ ಪ್ರದೇಶಗಳಲ್ಲಿ ೪೦-೬೦ ಕಿಮೀ ಗಾಳಿಯ ವೇಗದೊಂದಿಗೆ ತೀವ್ರವಾಗಿ ಚಂಡಮಾರುತ ಅಪ್ಪಳಿಸಲಿದೆ.ಗುಡುಗು ಸಹಿತ ಮಳೆ ಸುರಿಯಲಿದೆ.
ಕೆಲವು ಪ್ರದೇಶಗಳಲ್ಲಿ ಮುಂದಿನ ೨ ಗಂಟೆಗಳ ಕಾಲ ಇದೇ ಪರಿಸ್ಥಿತಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಇತ್ತೀಚಿನ ಟ್ವೀಟ್‌ನಲ್ಲಿ ತಿಳಿಸಿದೆ.
ಮುಂದಿನ ೨೪ ಗಂಟೆಗಳಲ್ಲಿ ದೆಹಲಿಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಭಾನುವಾರ ತಿಳಿಸಿದೆ.
ಇತ್ತೀಚಿನ ಉಪಗ್ರಹ ಮತ್ತು ರಾಡಾರ್ ಚಿತ್ರಗಳು ರಾಜಸ್ಥಾನದ ಕೆಲವು ಭಾಗಗಳು ಮತ್ತು ಪಂಜಾಬ್, ಹರ್ಯಾಣ, ಗುಜರಾತ್ ಪ್ರದೇಶ ಮತ್ತು ಪಕ್ಕದ ಮಧ್ಯಪ್ರದೇಶದ ಪಕ್ಕದ ಪ್ರದೇಶಗಳಲ್ಲಿ ಗುಡುಗು,ಮಿಂಚು,ಬಿರುಗಾಳಿ,ಬಿರುಗಾಳಿಯೊಂದಿಗೆ ಮಧ್ಯಮದಿಂದ ತೀವ್ರವಾದ ಮಳೆಯ ಸಾಧ್ಯತೆಯನ್ನು ತೋರಿಸುತ್ತವೆ ಎಂದು ಹವಾಮಾನ ಇಲಾಖೆ ಟ್ವೀಟ್ ಮಾಡಿದೆ.
ಹಿಮಾಚಲ ಪ್ರದೇಶ, ಆಗ್ನೇಯ ಉತ್ತರ ಪ್ರದೇಶ, ದಕ್ಷಿಣ ಒಡಿಶಾ-ಉತ್ತರ ಕರಾವಳಿ ಆಂಧ್ರಪ್ರದೇಶ-ದಕ್ಷಿಣ ಛತ್ತೀಸ್‌ಗಢ, ಗಂಗಾನದಿ ಪಶ್ಚಿಮ ಬಂಗಾಳ, ರಾಯಲಸೀಮಾ, ತಮಿಳುನಾಡು ,
ದಕ್ಷಿಣ ಒಳನಾಡು ಕರ್ನಾಟಕ ಮತ್ತು ಉತ್ತರ ಒಳನಾಡು ಕರ್ನಾಟಕ, ತೆಲಂಗಾಣ ಮತ್ತು ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪ್ ದ್ವೀಪಗಳ ಭಾಗಗಳಲ್ಲಿ ರಾತ್ರಿ ಸಮಯದಲ್ಲಿ
ಗುಡುಗು,ಮಿಂಚು,ಗಾಳಿ ಸಹಿತ, ಮಳೆ ಸುರಿಯುವ ಮುನ್ಸೂಚನೆ ಬಗ್ಗೆ ಹವಾಮಾನ ಇಲಾಖೆ ತಿಳಿಸಿದೆ.