ದೆಹಲಿಯಲ್ಲಿ ಖಾಕಿ ಸರ್ಪಗಾವಲು

ಡ್ರೋಣ್ ಹಾರಾಟ ನಿಷೇಧ

ನವದೆಹಲಿ,ಜೂ.೮-ದೇಶದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯಲಿರುವ ಎರಡನೇ ಪ್ರಧಾನಿ ಎನ್ನುವ ಹಿರಿಮೆ ಪಾತ್ರರಾಗಲಿರುವ ನರೇಂದ್ರ ಮೋದಿ ಅವರ ಐತಿಹಾಸಿಕ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಭೂಮಿ, ವಾಯು ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ದೆಹಲಿಯಲ್ಲಿ ನಡೆದ ಜಿ-೨೦ ಶೃಂಗಸಭೆಯಲ್ಲಿ ಪೊಲೀಸರು ರಚಿಸಿದ ಭದ್ರಕೋಟೆಯ ಮಾದರಿಯಲ್ಲಿ ಎಲ್ಲೆಲ್ಲೂ ಬಹು- ಹಂತದಲ್ಲಿ ಭಾರೀ ಬಿಗಿ ಭದ್ರತೆ ಸರ್ಪಗಾವಲು ವಿಧಿಸಲಾಗಿದೆ. ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ತಪಾಸಣೆ ಹೆಚ್ಚಿಸಲಾಗಿದ್ದು ಜೊತೆಗೆ ಜೂನ್ ೧೦ರ ತನಕ ದೆಹಲಿಯಲ್ಲಿ ದ್ರೋಣ್ ಹಾರಾಟ ಸಂಪೂರ್ಣ ನಿಷೇಧಿಸಿ ಹೈ ಅಲರ್ಟ್ ಘೋಷಿಸಲಾಗಿದೆ.
ನಾಳೆ ಸಂಜೆ.೭.೧೫ಕ್ಕೆ ರಾಷ್ಟ್ರಪತಿ ಭವನದಲ್ಲಿ ನೂತನ ಪ್ರಧಾನಿ ಮತ್ತು ಕೇಂದ್ರ ಸಚಿವ ಸಂಪುಟದ ಸದಸ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕಾರ ಗೋಪ್ಯತೆಯ ಪ್ರಮಾಣವಚನ ಬೋಧಿಸಲಿದ್ದು ಇಡೀ ದೆಹಲಿಯನ್ನು ಭದ್ರತಾ ಪಡೆಗಳು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ದೆಹಲಿಯಲ್ಲಿ ಅರೆಸೇನಾಪಡೆ ಸಿಬ್ಬಂದಿ ಎನ್‌ಎಸ್‌ಜಿ ಕಮಾಂಡೋಗಳು, ತೀಕ್ಷ್ಣ ಗುರಿಕಾರರು ಮತ್ತು ಡ್ರೋಣ್‌ಗಳನ್ನು ಒಳಗೊಂಡ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಇರಿಸಲಾಗಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಿದೇಶಿ ಮುಖ್ಯಸ್ಥರು ಭಾಗಿಯಾಗಲಿರುವ ಹಿನ್ನೆಲೆಯಲ್ಲಿ ಅವರು ಸಂಚರಿಸುವ ಮಾರ್ಗ ಸೇರಿದಂತೆ ಉಳಿದುಕೊಳ್ಳುವ ಹೋಟೆಲ್‌ನಲ್ಲಿ ಬಾರಿ ಭದ್ರತೆ ಒದಗಿಸಲಾಗಿದ್ದು ದೆಹಲಿ ಸಂಪೂರ್ಣ ಖಾಕಿಯ ಅಭೇದ್ಯ ಕೋಟೆಯಾಗಿ ಪರಿಣಮಿಸಿದೆ.
ಪ್ರಧಾನಿ ಮತ್ತು ಕೇಂದ್ರ ಸಚಿವ ಸಂಪುಟದ ಸದಸ್ಯರ ಪ್ರಮಾಣ ವಚನಕ್ಕೆ ಆಗಮಿಸುವ ಗಣ್ಯರಿಗೆ ಅವರ ಹೋಟೆಲ್‌ಗಳಿಂದ ಸ್ಥಳಕ್ಕೆ ಮತ್ತು ಹಿಂತಿರುಗಲು ಗೊತ್ತುಪಡಿಸಿದ ಮಾರ್ಗಗಳನ್ನು ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಪೊಲೀಸರ ಅಧಿಕೃತ ಸೂಚನೆಯು ದೆಹಲಿಯಲ್ಲಿ ಕೆಲವು ಹಾರುವ ವಸ್ತುಗಳ ಮೇಲಿನ ನಿಷೇಧ ಹೇರಲಾಗಿದ್ದು ಸ್ನೈಪರ್ ಗಳು ಮತ್ತು ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ಗಣ್ಯರು ಮತ್ತು ಡ್ರೋನ್‌ಗಳ ಮಾರ್ಗಗಳಲ್ಲಿ ನಿಯೋಜಿಸಲಾಗುವುದು, ಆದರೆ ಡ್ರೋಣ್‌ಗಳನ್ನು ರಾಷ್ಟ್ರ ರಾಜಧಾನಿಯ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ..
ಸಮಾರಂಭಕ್ಕೆ ಆಹ್ವಾನಿಸಲಾದ ಸಾರ್ಕ್ -ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘ ರಾಷ್ಟ್ರಗಳ ಗಣ್ಯರ ಉಪಸ್ಥಿತಿಗೆ ಸಾಕ್ಷಿಯಾಗಲು ದಿನವನ್ನು ನಿಗದಿಪಡಿಸಲಾಗಿದ್ದು ಭದ್ರತೆ ಮತ್ತಷ್ಟು ಬಿಗಿಗೊಳಿಸಲಾಗಿದೆ. ಕಳೆದ ವರ್ಷ ಜಿ-೨೦ ಶೃಂಗಸಭೆಗೆ ನಿಯೋಜಿಸಲಾಗಿದ್ದ ಮಾದರಿಯಲ್ಲಿ ಭದ್ರತೆ ಒದಗಿಸಲಾಗಿದೆ.
ದೆಹಲಿಯ ಕೇಂದ್ರ ಭಾಗಕ್ಕೆ ಹೋಗುವ ಹಲವಾರು ರಸ್ತೆ ಮಾರ್ಗಗಳನ್ನು ನಾಳೆ ಬೆಳಿಗ್ಗೆಯಿಂದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿಯುವ ತನಕ ಸಂಚಾರ ವ್ಯತ್ಯಯವಾಗಲಿದೆ.

೨,೫೦೦ ಪೊಲೀಸರ ನಿಯೋಜನೆ
ನಾಳೆ ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಐದು ಕಂಪನಿಗಳ ಅರೆಸೇನಾಪಡೆ ಮತ್ತು ದೆಹಲಿ ಸಶಸ್ತ್ರ ಪೊಲೀಸ್ ಜವಾನರು ಸೇರಿದಂತೆ ಸುಮಾರು ೨೫೦೦ ಪೊಲೀಸ್ ಸಿಬ್ಬಂದಿಯನ್ನು ಸ್ಥಳದ ಸುತ್ತಲೂ ನಿಯೋಜಿಸಲು ಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ದೆಹಲಿ ಪೊಲೀಸ್ ಅಧಿಕಾರಿಗಳ ಪ್ರಕಾರ, ಐದು ಕಂಪನಿಗಳ ಅರೆಸೈನಿಕ ಸಿಬ್ಬಂದಿ, ಎನ್‌ಎಸ್‌ಜಿ ಕಮಾಂಡೋಗಳು, ಡ್ರೋನ್‌ಗಳು ಮತ್ತು ಸ್ನೈಪರ್‌ಗಳೊಂದಿಗೆ ಬಹು-ಪದರದ ಭದ್ರತೆಯನ್ನು ಕಾರ್ಯಕ್ರಮಕ್ಕಾಗಿ ರಾಷ್ಟ್ರಪತಿ ಭವನವನ್ನು ಸುತ್ತುವರಿಯಲಾಗಿದೆ.

ಯಾರೆಲ್ಲಾ ಭಾಗಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಸಂಪುಟದ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಮಾಲ್ಡೀವ್ಸ್, ಭೂತಾನ್, ನೇಪಾಳ, ಮಾರಿಷಸ್ ಮತ್ತು ಸೆಶೆಲ್ಸ್‌ನ ಉನ್ನತ ನಾಯಕರು ಭಾಗವಹಿಸುವ ಸಾಧ್ಯತೆಯಿದೆ,ಇದಕ್ಕಾಗಿ ನಗರದ ಹೋಟೆಲ್‌ಗಳಾದ ಲೀಲಾ, ತಾಜ್, ಐಟಿಸಿ ಮೌರ್ಯ, ಕ್ಲಾರಿಡ್ಜಸ್ ಮತ್ತು ಒಬೆರಾಯ್ ಈಗಾಗಲೇ ಭದ್ರತೆಯ ಅಡಿಯಲ್ಲಿ ತರಲಾಗಿದೆ. ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ನಡೆಯಲಿರುವುದರಿಂದ ಆವರಣದ ಒಳಗೆ ಮತ್ತು ಹೊರಗೆ ಮೂರು ಹಂತದ ಭದ್ರತೆ ಏರ್ಪಡಿಸಲಾಗಿದೆ.ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಸೆಶೆಲ್ಸ್ ಉಪಾಧ್ಯಕ್ಷ ಅಹ್ಮದ್ ಅಫೀಫ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ’ಪ್ರಚಂಡ’ ಮತ್ತು ಭೂತಾನ್ ಸೇರಿದ್ದಾರೆ. ಪ್ರಧಾನ ಮಂತ್ರಿ ತ್ಶೆರಿಂಗ್ ಟೋಬ್ಗೇ ಮತ್ತಿತರು ಭಾಗಿಯಾಗಲಿದ್ದಾರೆ.