ದೆಹಲಿಯಲ್ಲಿ ಕೂಡ್ಲಿಗಿ ಕಲಾವಿದನ ಕನ್ನಡ ಭಜನೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಫೆ.28 :- ದೇಶದ ರಾಜಧಾನಿ ನವದೆಹಲಿಯಲ್ಲಿ ದೆಹಲಿ ಕನ್ನಡಿಗರ ಸಂಘ ಆಯೋಜಿಸಿದ  ಕನ್ನಡ ಡಿಂಡಿಮ ಕಾರ್ಯಕ್ರಮದಲ್ಲಿ ಅಪ್ಪಟ ಮೂಲೆಕಟ್ಟಿನ ಗ್ರಾಮೀಣ ಪ್ರತಿಭೆ ಭಜನಾ ಕಲಾವಿದ ಕೂಡ್ಲಿಗಿ ತಾಲೂಕಿನ ರಾಮಸಾಗರಹಟ್ಟಿ ಗುರುಶಂಕ್ರಪ್ಪ ಹಳ್ಳಿಯಿಂದ ದಿಲ್ಲಿಗೆ ತೆರಳಿ ಕನ್ನಡದ ಭಜನಾ ಪದವನ್ನು ಉಣಬಡಿಸಿದ್ದಾರೆ.
ನವದೆಹಲಿಯ ಟಾಲ್ಕಟೋರ್ ಕ್ರೀಡಾಂಗಣದಲ್ಲಿ 75ನೇ ವರ್ಷದ ಅಮೃತ ಮಹೋತ್ಸವದ ನಿಮಿತ್ತ ದೆಹಲಿ ಕರ್ನಾಟಕ ಸಂಘದಿಂದ ಆಯೋಜಿಸಿದ್ದ ಕನ್ನಡ ಡಿಂಡಿಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಲೂಕಿನ ರಾಮಸಾಗರಹಟ್ಟಿ ಗ್ರಾಮದ ಭಜನಾ ಕಲಾವಿದ ಗುರುಶಂಕ್ರಪ್ಪ ಅವರು ಕಳೆದೆರಡು ದಿನದ ಹಿಂದೆ ಕಾರ್ಯಕ್ರಮ ನೀಡಿ ಇಂದು ಕರ್ನಾಟಕದತ್ತ  ಕರ್ನಾಟಕದ ಕಲಾವಿದರ ತಂಡದ ಜೊತೆ  ಪ್ರಯಾಣ ಬೆಳೆಸುತ್ತಿದ್ದಾರೆ. 
ರಾಜ್ಯದ ನಾನಾ ಭಾಗದಿಂದ ಕಲಾವಿದರನ್ನು ಕರೆಯಿಸಿ ಕನ್ನಡ ನಾಡಿನ ಸಾಂಸ್ಕೃತಿಕ ವೈಭವವನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ  ದೆಹಲಿ ಕರ್ನಾಟಕ ಸಂಘ ಅನಾವರಣಗೊಳಿಸಿದೆ. ಕೂಡ್ಲಿಗಿ ತಾಲೂಕಿನ ರಾಮಸಾಗರಹಟ್ಟಿ ಗ್ರಾಮದ ಗುರುಶಂಕ್ರಪ್ಪ ಅವರು ಭಜನಾ ಕ್ಣೇತ್ರದ ಮೇರು ಕಲಾವಿದರಾಗಿದ್ದು, ಈಗಾಗಲೇ ಹಂಪಿ ಉತ್ಸವ ಸೇರಿ ನಾನಾ ಕಾರ್ಯಕ್ರಮಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಇದೀಗ, ರಾಷ್ಟ್ರ ರಾಜಧಾನಿಯಲ್ಲೂ ತಮ್ಮ ಕಲೆ ಪ್ರದರ್ಶಿಸಿದ್ದರಿಂದ  ಭಜನಾ ಕಲಾವಿದ ಗುರುಶಂಕ್ರಪ್ಪ ಅವರಿಗೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ.ನಾಗರಾಜ ಅವರು ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವ ಸಲ್ಲಿಸಿದ್ದಾರೆ.
ದೆಹಲಿಯ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿದ ಕೂಡ್ಲಿಗಿ ತಾಲೂಕಿನ ಕಲಾ ಪ್ರತಿಭೆಗಳಿಗೆ ಕೂಡ್ಲಿಗಿಯ ಕಲಾ ರಸಿಕರು ಹಾಗೂ ಕನ್ನಡಪರ ಸಂಘಟನೆಗಳು ಅಭಿನಂದನೆ ಸಲ್ಲಿಸಿವೆ.