ದೆಹಲಿಯಲ್ಲಿ ಒಂದು ವಾರ ಲಾಕ್‌ಡೌನ್


ನವದೆಹಲಿ, ಏ. ೧೯- ರಾಜಧಾನಿ ನವದೆಹಲಿಯಲ್ಲಿ ಪ್ರತಿದಿನ ಸೋಂಕಿನ ಅಬ್ಬರ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದ ೬ ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.
ದೆಹಲಿಯಲ್ಲಿ ೨೫,೪೬೨ ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಈ ಮೊದಲು ವಾರಾಂತ್ಯಕ್ಕೆ ಸೀಮಿತವಾಗಿದ್ದ ಲಾಕ್ ಡೌನ್ ಈಗ ಒಂದು ವಾರದವರೆಗೂ ಸಂಪೂu ಲಾಕ್ ಡೌನ್ ವಿಧಿಸಲಾಗಿದೆ. ಅಗತ್ಯ ವಸ್ತುಗಳಾದ ಔಷಧ, ತರಕಾರಿ, ಹಾಲು, ದಿನಸಿ ಅಂಗಡಿಗಳಿಗೆ ಲಾಕ್ ಡೌನ್‌ನಿಂದ ವಿನಾಯಿತಿ ನೀಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸುದ್ಧಿಗೋಷ್ಟಿಯಲ್ಲಿ ಪ್ರಕಟಿಸಿದರು.
ಜನ ಸಹಕಾರವಿಲ್ಲದೆ ಕೋವಿಡ್ ನಿಯಂತ್ರಣ ಅಸಾಧ್ಯ. ದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಇದರಿಂದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಹೇಳಿದರು.
ದೆಹಲಿ ಸರ್ಕಾರ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸಾಕಷ್ಟು ಕ್ರಮ ಕೈಗೊಂಡಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಕಂಡು ಬಂದಿದೆ. ದೆಹಲಿ ೪ನೇ ಹಂತದ ಕೊರೊನಾ ಅಲೆ ಕಾಣಿಸಿಕೊಂಡಿದೆ. ಹೀಗಾಗಿ ಅಗತ್ಯ ವಸ್ತುಗಳಿಗೆ ಆದ್ಯತೆ ನೀಡುತ್ತೇವೆ. ಆದ್ದರಿಂದ ಸಣ್ಣ ಪ್ರಮಾಣದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇಂದು ರಾತ್ರಿ ೧೦ ಗಂಟೆಯಿಂದ ಮುಂದಿನ ಸೋಮವಾರ ಬೆಳಿಗ್ಗೆ ೫ ಗಂಟೆಯವರೆಗೂ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಮುಖ್ಯಮಂತ್ರಿಗಳು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಜತೆ ಸಭೆ ನಡೆಸಿದ ನಂತರ ಒಂದು ವಾರಗಳ ಕಾಲ ಲಾಕ್ ಡೌನ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
೧೬೦ ಮಂದಿ ಸೋಂಕಿಗೆ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇ. ೨೯.೭೪ ರಷ್ಟಿದೆ. ೨೦,೨೫೯ ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ೭೪,೯೪೧ ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ೧೨,೧೨೧ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.