ದೆಹಲಿಯಲ್ಲಿ ಆಕ್ಸಿಜನ್ ಸಿಗದೆ 25 ರೋಗಿಗಳ ಸಾವು

ನವದೆಹಲಿ,ಏ.೨೩- ರಾಜಧಾನಿ ದೆಹಲಿಯಲ್ಲಿ ಆಮ್ಲಜನಕಕ್ಕೆ ಹಾಹಾಕಾರ ಉಂಟಾಗಿದೆ. ಕಳೆದ ೨೪ ತಾಸುಗಳಲ್ಲಿ ೨೫ ಮಂದಿ ರೋಗಿಗಳು ಆಕ್ಸಿಜನ್ ಸಿಗದೆ ಸಾವನ್ನಪ್ಪಿದ್ದಾರೆ. ಇತರ ೬೦ ಮಂದಿ ರೋಗಿಗಳು ಸಾವು-ಬದುಕಿನ ನಡುವೆ ನರಳಾಡುವಂತಾಗಿದೆ.
ದೇಶದ ಆಡಳಿತ ಶಕ್ತಿಕೇಂದ್ರ ದೆಹಲಿಯಲ್ಲೇ ಇಂತಹ ಘನಘೋರ ಸ್ಥಿತಿ ನಿರ್ಮಾಣವಾದರೆ, ಬೇರೆ ರಾಜ್ಯಗಳಲ್ಲಿನ ಪರಿಸ್ಥಿತಿ ಇನ್ನಷ್ಡು ದಯನೀಯ ಹಂತ ತಲುಪಿರುವುದರಲ್ಲಿ ಅನುಮಾನವಿಲ್ಲ.
ಈಗಿರುವ ಆಮ್ಲಜನಕ ಮುಕ್ತಾಯಗೊಳ್ಳುವ ಹಂತ ತಲುಪಿದ್ದು, ವೆಂಟಿಲೇಟರ್‌ಗಳು ಬಿಐಪಿಎಪಿ ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಇದೂ ಕೂಡ ಆತಂಕವನ್ನು ಹೆಚ್ಚಿಸಿದೆ. ಏಕೆಂದರೆ ಇನ್ನು ೬೦ ರೋಗಿಗಳು ಅಪಾಯದಲ್ಲಿದ್ದು, ಭಾರಿ ಬಿಕ್ಕಟ್ಟು ಎದುರಾಗುವ ಆತಂಕ ಎದುರಾಗಿದೆ.
ಇಲ್ಲಿನ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಅಸ್ಪತ್ರೆಯ ಅಧಿಕಾರಿಗಳು ಐಸಿಯು ಮತ್ತು ತುರ್ತು ವಿಭಾಗಗಳಲ್ಲಿ ಮಾನವಚಾಲಿತ ವೆಂಟಿಲೇಷನ್ ಆಶ್ರಯಿಸಲು ಅಧಿಕಾರಿಗಳು ತೀವ್ರ ಪ್ರಯತ್ನ ನಡೆಸಿದ್ದಾರೆ.
ಕೇಂದ್ರ ದೆಹಲಿಯಲ್ಲಿರುವ ಈ ಆಸ್ಪತ್ರೆಯಲ್ಲಿ ೫೦೦ಕ್ಕೂ ಹೆಚ್ಚು ಕೊರೊನಾ ರೋಗಿಗಳು ದಾಖಲಾಗಿದ್ದು, ಈ ಪೈಕಿ ೧೫೦ ಮಂದಿಗೆ ಕ್ಷಿಪ್ರಗತಿಯ ಆಮ್ಲಜನಕ ನೆರವು ಒದಗಿಸಲಾಗಿದೆ.
ತಡರಾತ್ರಿ ೫ ತಾಸುಗಳು ಆಮ್ಲಜನಕ ಪೂರೈಸಲು ಮಾತ್ರ ಅವಕಾಶವಿತ್ತು. ಇದನ್ನು ರಾತ್ರಿ ೧ ಗಂಟೆವರೆಗೂ ರೋಗಿಗಳಿಗೆ ಪೂರೈಕೆ ಮಾಡಲಾಗಿದೆ. ತುರ್ತಾಗಿ ಆಮ್ಲಜನಕ ಪೂರೈಸುವಂತೆ ವಿತರಕರಿಗೆ ಮನವಿ ಮಾಡಿದ್ದೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ದಿನಗಳಿಂದ ದೆಹಲಿಯ ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಹಾಹಾಕಾರ ಉಂಟಾಗಿದ್ದು, ರೋಗಿಗಳು ಪರಿತಪಿಸುವಂತಾಗಿದೆ.
ಈ ಮಧ್ಯೆ ತುರ್ತಾಗಿ ಆಕ್ಸಿಜನ್ ಪೂರೈಸುವಂತೆ ಆಸ್ಪತ್ರೆ ಅಧಿಕಾರಿಗಳು ಮಾಡಿಕೊಂಡ ಮನವಿ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಆಕ್ಸಿಜನ್ ಟ್ಯಾಂಕರ್‌ಗಳನ್ನು ರವಾನಿಸಿದೆ. ದೆಹಲಿಯ ಮ್ಯಾಕ್ಸ್ ಸ್ಮಾರ್ಟ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ತುರ್ತು ಆಕ್ಸಿಜನ್‌ಗೆ ಬೇಡಿಕೆ ಸಲ್ಲಿಸಿದ್ದು, ಟ್ಯಾಂಕರ್ ಮೂಲಕ ಆಕ್ಸಿಜನ್ ರವಾನಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ವಿವರಿಸಿದ್ದಾರೆ.
ದೆಹಲಿಯ ಬಹುತೇಕ ಅಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗಿದ್ದು, ರೋಗಿಗಳ ಸಂಬಂಧಿಕರು ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.