ದೆಹಲಿಯತ್ತ ನುಗ್ಗಲು ರೈತರ ಯತ್ನ: ಲಾಠಿಪ್ರಹಾರ

ರವೇರಿ( ಹರ್ಯಾಣ) .ಜ.೪- ಹರಿಯಾಣದ ಗಡಿಭಾಗ ರವೇರಿ- ಅಲ್ವಾರ್‌ನಲ್ಲಿ ನೂರಾರು ರೈತರು ದೆಹಲಿಯತ್ತ ಮುನ್ನುಗ್ಗಲು ಯತ್ನಿಸಿದ ಹಿನ್ನೆಲೆಯಲ್ಲಿ ಅವರ ಮೇಲೆ ಅಶ್ರುವಾಯು ಹಾಗೂ ಜಲ ಫಿರಂಗಿ ಸಿಡಿಸಿ ಲಾಠಿ ಪ್ರಹಾರ ನಡೆಸಿದ ಘಟನೆ ಇಂದು ನಡೆದಿದೆ.
ರೈತರ ಮೇಲೆ ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿ ಸಿಡಿಸಿದ ಹಿನ್ನೆಲೆಯಲ್ಲಿ ರೈತರು ಕೆರಳಿ ಕೆಂಡವಾಗಿದ್ದಾರೆ.
ದೆಹಲಿಯತ್ತ ಆಗಮಿಸಿದ ರೈತರನ್ನು ಮಾನಸಿ ಬಳಿ ಪೋಲೀಸರು ತಡೆದ ಹಿನ್ನೆಲೆಯಲ್ಲಿ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ರೈತರ ಮೇಲೆ ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿ ಸಿಡಿಸಿದರು.
ರೈತರು ಏಕಾಏಕಿ ದೆಹಲಿಯತ್ತ ನುಗ್ಗಿದ ಹಿನ್ನೆಲೆಯಲ್ಲಿ ಅವರನ್ನು ಅನಿವಾರ್ಯವಾಗಿ ತಡೆಯಬೇಕಾಯಿತು ಮತ್ತು ಜಲಫಿರಂಗಿ ಸಿಡಿಸಲಾಯಿತು ಎಂದು ರೇವಾರಿ ಪೊಲೀಸ್ ಮುಖ್ಯಸ್ಥ ಅಭಿಷೇಕ್ ಜೋರ್ವಲ್ ತಿಳಿಸಿದ್ದಾರೆ.
ರೈತ ನಾಯಕರು ಮತ್ತು ಕೇಂದ್ರಸರ್ಕಾರದ ಸಚಿವರೊಂದಿಗೆ ೭ನೇ ಸುತ್ತಿನ ಮಾತುಕತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನೂರಾರು ರೈತರು ದೆಹಲಿಯತ್ತ ಆಗಮಿಸಲು ಮುಂದಾಗಿದ್ದರು.
ಲಾಠಿಪ್ರಹಾರ
ಈ ನಡುವೆ ಪಂಜಾಬ್‌ನ ಸಂಗೂರ್ ಜಿಲ್ಲೆಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಶ್ವನಿ ಕುಮಾರ್ ಶರ್ಮ ಅವರು ನಡೆಸುತ್ತಿದ್ದ ಸಭೆಯತ್ತ ತೆರಳಲು ಆಗಮಿಸುತ್ತಿದ್ದರು. ಈ ವೇಳೆ ಪೊಲೀಸರು ರೈತರನ್ನು ಚದುರಿಸಲು ಅವರ ಮೇಲೆ ಲಾಠಿಪ್ರಹಾರ ನಡೆಸಿದ್ದಾರೆ.