ದೆಹಲಿಗೆ ಹೋಗುತ್ತಿದ್ದ ರೈತರ ಬಂಧನ ವಿರೋಧಿಸಿ ರಸ್ತೆ ತಡೆ

ಕಲಬುರಗಿ:ಫೆ.12: ಸಾಲ ಮನ್ನಾ ಸೇರಿದಂತೆ ರೈತರ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತ ರತ್ನ ಕುರುಬೂರ್ ಶಾಂತಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕದಿಂದ ದೆಹಲಿ ಹೋರಾಟಕ್ಕೆ ಹೊರಟಿದ್ದ ರೈತರನ್ನು ಬಂಧಿಸಿದ ಕ್ರಮವನ್ನು ಖಂಡಿಸಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರೈತರು ರಸ್ತೆ ತಡೆ ಚಳುವಳಿ ಮಾಡಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ರಾಜ್ಯದಲ್ಲಿ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ ರೈತರ ಬಾಳು ಸುಧಾರಿಸಲು ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ, ಬರಗಾಲದ ಪರಿಹಾರ ಹಣ ಕನಿಷ್ಠ ಒಂದು ಎಕರೆಗೆ 25000ರೂ.ಗಳ ಪರಿಹಾರ ಒದಗಿಸುವಂತೆ, ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿದರು.
60 ವರ್ಷ ವ್ಯವಸಾಯ ಮಾಡಿದ ರೈತನಿಗೆ 10,000ರೂ.ಗಳನ್ನು ತಿಂಗಳಿಗೆ ಪಿಂಚಣಿ ಕೊಡುವಂತೆ, ಬತ್ತಿದ ಭೀಮಾ ನದಿಗೆ ದನಕರುಗಳಿಗೆ ಕುಡಿಯಲು ನೀರು ಬಿಡುವಂತೆ, ಕೆಪಿಆರ್ ಸಕ್ಕರೆ ಕಾರ್ಖಾನೆ ಕಳೆದ ವರ್ಷ 50ರೂ.ಗಳ ಬಾಕಿ ಹಣ ಇನ್ನೂ ನೀಡಿಲ್ಲ. ಕೂಡಲೇ ಜಿಲ್ಲಾಡಳಿತ ಬಾಕಿ ಹಣ ಕೊಡಿಸುವಂತೆ, ರಾಜ್ಯ ಸರ್ಕಾರ ತನ್ನ ಬಜೆಟ್‍ನಲ್ಲಿ ರೈತರಿಗೆ ಅನುಕೂಲವಾಗುವ ಬಜೆಟ್ ಘೋಷಣೆ ಮಾಡಿ ರೈತರಿಗೆ ನೆರವು ನೀಡುವಂತೆ ಅವರುಒತ್ತಾಯಿಸಿದರು.
ದೆಹಲಿಗೆ ಹೊರಟಿದ್ದ ರೈತರನ್ನು ಬಂಧಿಸಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಹೂಗಾರ್, ರೈತ ಮುಖಂಡರಾದ ರೇವಣಸಿದ್ದಯ್ಯ ಮಠ್, ಕಾಶಿನಾಥ್ ಕಲಾಲ್, ರೇವಣಸಿದ್ದ ನಾಟಿಕಾರ್, ಭಗವಂತರಾಯ್ ಹೂಗಾರ್, ಬಾಳುಗೌಡ ಮಾಲಿಪಾಟೀಲ್ ಮುಂತಾದವರು ಪಾಲ್ಗೊಂಡಿದ್ದರು. ರಸ್ತೆ ತಡೆ ಚಳುವಳಿಯಿಂದಾಗಿ ಮುಖ್ಯ ಮಾರ್ಗದಲ್ಲಿ ಕೆಲ ಹೊತ್ತು ವಾಹನಗಳ ಸಂಚಾರಕ್ಕೆ ತೀವ್ರ ಅಸ್ತವ್ಯಸ್ತಗೊಂಡಿತು.