ವಿಶ್ವನಾಯಕರ ಸಮಾಗಮಕ್ಕೆ ಕ್ಷಣಗಣನೆ

ಜಿ-೨೦ ಶೃಂಗಸಭೆ
ನಾಳೆ ದೆಹಲಿಯ ಜಿ-೨೦ ಶೃಂಗಸಭೆಗೆ ಆಗಮಿಸಿದ ವಿಶ್ವದ ದಿಗ್ಗಜ ನಾಯಕರು: ಜಾಗತಿಕ ವಿಚಾರಗಳ ಮಂಥನ
ನವದೆಹಲಿ,ಸೆ.೮- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಳೆ ಮತ್ತು ನಾಡಿದ್ದು ನಡೆಯಲಿರುವ ೧೮ನೇ ಜಿ-೨೦ ಶೃಂಗಸಭೆಯಲ್ಲಿ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ವಿಶ್ವ ನಾಯಕರ ಸಮಾಗಮಕ್ಕೆ ಕ್ಷಣಗಣನೆ ಆರಂಭವಾಗಿದೆ.ಈ ವೇಳೆ ೧೫ಕ್ಕೂ ಹೆಚ್ಚು ದೇಶಗಳ ನಾಯಕರ ಜತೆ ಪ್ರಧಾನಿ ಮೋದಿ ಅವೆರು ದ್ವಿಪಕ್ಷೀಯ ಬಾಂಧವ್ಯ ಕುರಿತು ಚರ್ಚೆ ನಡೆಸಲಿದ್ದಾರೆ.
ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರಲ್ಲದೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್, ಮಾರಿಷಸ್ ಪ್ರಧಾನಿ ಪರ್ವಿಂದ್ ಜುಗನ್ನಾಥ್ ಸೇರಿದಂತೆ ೧೨೫ ರಾಷ್ಟ್ರಗಳ ಮುಖ್ಯಸ್ಥರು,ಅವರ ಪ್ರತಿನಿಧಿಗಳು ಶೃಂಗ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಈಗಾಗಲೇ ಹಲವು ದೇಶಗಳ ಮುಖ್ಯಸ್ಥರು ದೆಹಲಿಗೆ ಆಗಮಿಸಿದ್ದು ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ಜಾಗತಿಕ ನಾಯಕರು ಸಂಜೆ ವೇಳೆಗೆ ದೆಹಲಿ ತಲುಪಲಿದ್ದಾರೆ. ವಿಶ್ವದ ನಾಯಕರಿಗೆ ರತ್ನಗಂಬಳಿ ಸ್ವಾಗತ ನೀಡಲು ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲಿ ಸಜ್ಜಾಗಿದೆ.
ರಾಜಧಾನಿಯ ರಸ್ತೆಗಳಲ್ಲಿ ಜಿ-೨೦ ಶೃಂಗಸಭೆಯ ಸ್ವಾಗತ ಕಮಾನುಗಳು, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.
ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ-೨೦ ಶೃಂಗಸಭೆಯನ್ನು ಅವಿಸ್ಮರೀಣಯವಾಗಿಸಲು ಮತ್ತು ಜಗತ್ತಿನ ನಾಯಕರ ಮುಂದೆ ಭಾರತದ ಘನತೆ,ಗೌರವ ಮತ್ತು ಪ್ರತಿಷ್ಠೆಯ ಅನಾವರಣಕ್ಕೆ ಕೇಂದ್ರ ಸರ್ಕಾರ ಸಕಲ ಸಿದ್ದತೆ ಮಾಡಿಕೊಂಡಿದೆ.
ಜಗತ್ತಿನ ದೊಡ್ಡಣ್ಣ ಸೇರಿದಂತೆ ಘಟಾನುಘಟಿ ನಾಯಕರು ಜಿ-೨೦ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಕೊಂಚವೂ ಲೋಪದೋಷ ಎದುರಾಗದಂತೆ ಎಚ್ಚರಿಕೆ ವಹಿಸಲಾಗಿದೆ.
ಆಕಾಶದಲ್ಲಿ ವಿಮಾನಗಳ ಕಣ್ಣು
ಜಿ-೨೦ ಶೃಂಗಸಭೆ ಹಿನ್ನೆಲೆಯಲ್ಲಿ ಆಕಾಶದಲ್ಲಿ ಫೈಟರ್ ಜೆಟ್‌ಗಳಿಂದ ಹಿಡಿದು ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ ವ್ಯವಸ್ಥೆಗಳು ಮತ್ತು ವಾಯುಗಾಮಿ ಕಣ್ಗಾವಲು ಇರಿಸಲಾಗಿದೆ.
ಡ್ರೋನ್ ವಿರೋಧಿ ವ್ಯವಸ್ಥೆಗಳು, ಯಾವುದೇ ವಾಯು ಮಾರ್ಗದ ಬೆದರಿಕೆ ಪತ್ತೆಹಚ್ಚಲು, ಮತ್ತು ತಟಸ್ಥಗೊಳಿಸಲು ವಾಯುಪಡೆ ವಾರಾಂತ್ಯದದಿಂದ ಕಸರತ್ತು ನಡೆಸಿದೆ.”ಡ್ರೋನ್‌ಗಳು, ಗ್ಲೈಡರ್ಗಳು, ಸಣ್ಣ ವಿಮಾನಗಳು, ಕ್ಷಿಪಣಿಗಳು ಮತ್ತು ಯುದ್ಧ ವಿಮಾನಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಬೆದರಿಕೆಗಳ ವಿರುದ್ಧ ರಾಜಧಾನಿಯನ್ನು ರಕ್ಷಿಸಲು ಐಎಎಫ್‌ನ ವಾಯು ರಕ್ಷಣಾ ಕಣ್ಗಾವಲಿನಲ್ಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವ್ಯಾಪಕ ಭದ್ರತೆ:
ಜಗತ್ತಿನ ಗಣ್ಯಾತಿ ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭಯೋತ್ಪಾದನೆಯ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು ೧೩ ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂಧಿಗಳನ್ನು ಭದ್ರತೆ ಬಿಗಿ ಗೊಳಿಸಲಾಗಿದೆ.
ಆಕಾಶದಲ್ಲಿ ಭಾರತೀಯ ವಾಯುಪಡೆಯ ವಿವಿಧ ಯುದ್ದ ವಿಮಾನಗಳು ಹದ್ದಿನ ಕಣ್ಣಿಟ್ಟಿವೆ. ಮತ್ತೊಂದೆಡೆ ಕ್ಷಿಪಣೀಗಳು ಸಜ್ಜಾಗಿವೆ. ಇದಲ್ಲದೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ, ರಾಜ್ಯ ಪೊಲೀಸರು, ಸೇನಾಪಡೆ, ಗಡಿ ಭದ್ರತಾ ಪಡೆ, ಅರೆ ಸೇನಾ ಪಡೆ ಸೇರಿದಂತೆ ಬಹುಹಂತಗಳಲ್ಲಿ ಭದ್ರತೆ ಒದಗಿಸಲಾಗಿದೆ.
ದೆಹಲಿ ಪೊಲೀಸ್ ಮತ್ತು ಕೇಂದ್ರ ಪಡೆಗಳು ಸೇರಿದಂತೆ ೧೩೦,೦೦೦ ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯ ನಿಯೋಜನೆ ಮಾಡಲಾಗಿದ್ದು ಪ್ರಮುಖ ಸ್ಥಳಗಳಲ್ಲಿ ಡ್ರೋನ್ ವಿರೋಧಿ ವ್ಯವಸ್ಥೆಗಳ ಅಳವಡಿಕೆ. ನಗರದಾದ್ಯಂತ ಸಂಚಾರಿ ಪೊಲೀಸ್ ಠಾಣೆಗಳು ಮತ್ತು ಚೆಕ್‌ಪೊಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಜನರು ಮತ್ತು ವಾಹನಗಳ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ.
ಕಣ್ಗಾವಲು
ದೆಹಲಿಯ ವಿವಿಧ ಭಾಗಗಳಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಡ್ರೋನ್‌ಗಳ ಮೂಲಕ ಹೆಚ್ಚಿನ ಕಣ್ಗಾವಲು ಇಡಲಾಗಿದ್ದು ಭಯೋತ್ಪಾದನೆಯ ಬೆದರಿಕೆ ಮತ್ತು ಇತರ ಭದ್ರತಾ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ವ್ಯವಸ್ಥೆ ತೀವ್ರಗೊಳಿಸಲಾಗಿದೆ.
ಭಾರತೀಯ ವಾಯುಪಡೆ ನಾಳೆ ಮತ್ತು ನಾಡಿದ್ದು ನಡೆಯಲಿರುವ ಜಿ-೨೦ ಶೃಂಗಸಭೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದೆ. ಸಂಭವನೀಯ ಬೆದರಿಕೆಗಳ ವ್ಯಾಪಕ ವ್ಯಾಪ್ತಿಯಿಂದ ರಾಷ್ಟ್ರೀಯ ರಾಜಧಾನಿಯನ್ನು ರಕ್ಷಿಸಲು ಹಲವಾರು ಕಸರತ್ತು ನಡೆಸಿದೆ.

ಔತಣಕೂಟಕ್ಕೆ ಆಹ್ವಾನ
ನವದೆಹಲಿಯಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಮಹತ್ವದ ಜಿ-೨೦ ಶೃಂಗಸಭೆ ನಡೆಯಲಿದ್ದು, ಈ ಶೃಂಗಸಭೆಯ ಅಂಗವಾಗಿ ಶನಿವಾರ ನಡೆಯಲಿರುವ ವಿದೇಶಿ ಗಣ್ಯರ ಔತಣಕೂಟಕ್ಕೆ ಮಾಜಿ ಪ್ರಧಾನಿಗಳಾದ ಮನ್‌ಮೋಹನ್‌ಸಿಂಗ್, ಹೆಚ್.ಡಿ ದೇವೇಗೌಡ ಇವರುಗಳಿಗೆ ಆಹ್ವಾನ ನೀಡಲಾಗಿದೆ.
ರಾಷ್ಟ್ರಪತಿ ದ್ರೌಪದಿಮುರ್ಮು ಅವರ ಸಮ್ಮುಖದಲ್ಲಿ ಈ ಔತಣಕೂಟ ನಡೆಯಲಿದ್ದು, ಈ ಔತಣಕೂಟಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಲಾಗಿದೆ.
ಹೆಚ್‌ಡಿಡಿ ಗೈರು
ಶೃಂಗಸಭೆಯ ಅಂಗವಾಗಿ ರಾಷ್ಟ್ರಪತಿ ದ್ರೌಪದಿಮುರ್ಮು ಅವರು ನಾಳೆ ರಾತ್ರಿ ನವದೆಹಲಿಯಲ್ಲಿ ಆಯೋಜಿಸಿರುವ ಔತಣಕೂಟದಲ್ಲಿ ಭಾಗಿಯಾಗುತ್ತಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.
ಜಿ-೨೦ ಶೃಂಗಸಭೆಯ ಆಹ್ವಾನ ಬಂದಿದೆ, ಆರೋಗ್ಯ ಕಾರಣಗಳಿಂದ ತಾವು ಈ ಜಿ-೨೦ ಶೃಂಗಸಭೆಯ ಔತಣಕೂಟದಲ್ಲಿ ಭಾಗಿಯಾಗುತ್ತಿಲ್ಲ. ಈ ಬಗ್ಗೆ ಕೇಂದ್ರಸರ್ಕಾರಕ್ಕೆ ಮಾಹಿತಿ ರವಾನಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಜಿ-೨೦ ಶೃಂಗಸಭೆ ದೊಡ್ಡ ಯಶಸ್ಸು ಕಾಣಲಿ ಎಂದು ಶುಭಕೋರಿದ್ದಾರೆ.