ದೆಹಲಿಗೆ ದೌಡು: ಉಪಸಮರ: ಸತೀಶ್ ಸ್ಪರ್ಧೆ ಖಚಿತ

ಬೆಂಗಳೂರು, ಮಾ. ೨೨- ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಅವರು ಚುನಾವಣಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಪಕ್ಷದ ಹೈಕಮಾಂಡ್ ಜತೆ ಚರ್ಚಿಸಲು ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸತೀಶ್ ಜಾರಕಿಹೊಳಿ ಅವರು ಕಣಕ್ಕಿಳಿದರೆ ಗೆಲುವು ಸಾಧ್ಯ ಎಂಬುದನ್ನು ಮನಗಂಡಿರುವ ರಾಜ್ಯದ ಕಾಂಗ್ರೆಸ್ ನಾಯಕರು ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸ್ಸು ಮಾಡಿದ್ದಾರೆ.
ಈ ಬಗ್ಗೆ ಹೈಕಮಾಂಡ್ ಇನ್ನೆರಡು-ಮೂರು ದಿನಗಳಲ್ಲಿ ನಿರ್ಧಾರ ಪ್ರಕಟಿಸುವರು. ವರಿಷ್ಠರ ನಿರ್ಧಾರ ಪ್ರಕಟಣೆಗೂ ಮುನ್ನ ಸತೀಶ್ ಜಾರಕಿಹೊಳಿ ಅವರು ವರಿಷ್ಠರೊಂದಿಗೆ ಚರ್ಚೆ ನಡೆಸುವರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಮುನ್ನ ಪಕ್ಷದ ವರಿಷ್ಠರ ಜತೆ ಚರ್ಚಿಸಿ ಕೆಲ ವಿಚಾರಗಳಲ್ಲಿ ಸ್ಪಷ್ಟತೆ ಕಾಯ್ದುಕೊಳ್ಳಲು ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿದ್ದಾರೆ.
ಇಂದು ದೆಹಲಿಯಲ್ಲಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸರ್ಜೆವಾಲಾ ಸೇರಿದಂತೆ ಹಲವು ನಾಯಕರ ಜತೆ ಸಮಾಲೋಚನೆ ನಡೆಸುವರು.
ಮಗಳಿಗೆ ಟಿಕೆಟ್: ಷರತ್ತು
ದೆಹಲಿಯಲ್ಲಿರುವ ಸತೀಶ್ ಜಾರಕಿಹೊಳಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತಾವು ಗೆಲುವು ಸಾಧಿಸಿದರೆ ತೆರವಾಗುವ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತಮ್ಮ ಪುತ್ರಿಕೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂಬ ಷರತ್ತನ್ನು ವರಿಷ್ಠರ ಮುಂದೆ ಇಡಲಿದ್ದು, ವರಿಷ್ಠರು ಅದಕ್ಕೆ ಒಪ್ಪಿದರೆ ಮಾತ್ರ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಹೇಳಲಾಗಿದೆ.
ಯಮಕನಮರಡಿ ವಿಧಾನಸಭಾ ಕ್ಷೇತ್ರ ನವ್ಮ ಕುಟುಂಬದಲ್ಲೆ ಉಳಿಯಬೇಕು ಎಂಬ ಬಯಕೆ ಹೊಂದಿರುವ ಸತೀಶ್ ಜಾರಕಿಹೊಳಿ ಅದನ್ನು ಪಕ್ಷದ ವರಿಷ್ಠರಿಗೂ ಮನವರಿಕೆ ಮಾಡಿಕೊಟ್ಟು, ಒಂದು ವೇಳೆ ಯಮಕನಮರಡಿ ಕ್ಷೇತ್ರದ ಉಪಚುನಾವಣೆ ನಡೆದರೆ ತಮ್ಮ ಪುತ್ರಿಗೆ ಟಿಕೆಟ್ ನೀಡಬೇಕು ಎಂಬುದು ಸತೀಶ್‌ಜಾರಕಿಹೊಳಿ ಅವರ ಬೇಡಿಕೆಯಾಗಿದೆ.
ವರಿಷ್ಠ ನಾಯಕರು ಸತೀಶ್ ಜಾರಕಿಹೊಳಿಯವರ ಬೇಡಿಕೆಯನ್ನು ಒಪ್ಪಿಕೊಂಡರೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸತೀಶ್ ಜಾರಕಿಹೊಳಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ. ವರಿಷ್ಠರ ತೀರ್ಮಾನದ ಮೇಲೆ ಎಲ್ಲವೂ ನಿಂತಿದೆ.