ದೆಹಲಿಗಡಿಗಳ ರೈತರ ಸ್ಮಾರಕಗಳಿಗೆ ಕರ್ನಾಟಕದ ಮಣ್ಣು ಸಂಗ್ರಹ

ಬಳ್ಳಾರಿ ಮಾ 22 : ದೆಹಲಿಯ ಮೂರು ಗಡಿಗಳಲ್ಲಿ ಮುಂದಿನ ತಿಂಗಳು ನಿರ್ಮಾಣವಾಗಲಿರುವ ರೈತ ಸ್ಮಾರಕಗಳಿಗೆ ಕರ್ನಾಟಕದ ರೈತ ಹೋರಾಟಗಳ ನೆನಪಿನ ಮಣ್ಣು ನೀಡುವುದಕ್ಕಾಗಿ
ರೈತರ ಮುಷ್ಕರವನ್ನು ಬೆಂಬಲಿಸಿ ಮಾ.5ರಿಂದ ಬಸವ ಕಲ್ಯಾಣದಿಂದ ಆರಂಭವಾಗಿರುವ ರೈತರ ಪಾದಯಾತ್ರೆಯಲ್ಲಿ‌ಪಾಲ್ಗೊಂಡಿರುವ ಹೋರಾಟಗಾರರು ಮಾರ್ಗ ಮಧ್ಯದ 26 ಗ್ರಾಮಗಳ ಹೊಲಗಳಲ್ಲಿ ಮಣ್ಣನ್ನು ಸಂಗ್ರಹಿಸಲಾಗಿದೆ.
ರಾಜ್ಯ ರೈತ ಸಂಘ‌ಹಾಗು ಚಾಗನೂರು–ಸಿರಿವಾರ ಭೂ ಸಂರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದಿರುವ ಪಾದಯಾತ್ರೆ ನಾಳೆ ಬಳ್ಳಾರಿಯಲ್ಲಿ ಸಮಾರೋಪಗೊಳ್ಳಲಿದೆ. ಈ ಪಾದಯಾತ್ರೆಯಲ್ಲಿ‌ ಪಾಲ್ಗೊಂಡಿರುವ ಲೇಖಕ ಸ.ರಘುನಾಥ ಅವರು ಬಸವ ಕಲ್ಯಾಣ, ಮುಡುಬಿ, ಕಮಲಾಪುರ, ಕಲಬುರ್ಗಿ, ಶಹಬಾದ್, ಜೇವರ್ಗಿ, ಹನಮಂತವಾಡಿ, ಕಲಮನ ತಾಂಡ, ಕೆಲ್ಲೂರು, ಹುಲಿಕಲ್ಲು, ಬಿ.ಗುಡಿ, ಶಹಾಪುರ, ಸುರಪುರ, ದೇವಲಾಪುರ, ಸಂತೇಕಲ್ಲಹಳ್ಳಿ, ಮಸ್ಕಿ, ಲಿಂಗಸುಗೂರು, ತಿಂಥಿಣಿ, ಸಿಂಧನೂರು, ಸಿರುಗುಪ್ಪ, ಕಪ್ಪಗಲ್ಲು, ಸಿರಿವಾರ, ಚಾಗನೂರು ಗ್ರಾಮಗಳಲ್ಲಿ ಮಣ್ಣು ಸಂಗ್ರಹಿಸಿದ್ದಾರೆ.
ಆ ಮಣ್ಣಿಗೆ ಪೂಜೆ ಸಲ್ಲಿಸುವ ಮೂಲಕವೇ ಸಮಾರೋಪ ಸಮಾರಂಭ ಉದ್ಘಾಟಿಸುವುದಾಗಿ‌ ಹೇಳಿದ್ದಾರೆ.
ಹೋರಾಟದ ನೇತೃತ್ವ ವಹಿಸಿರುವ ಮುಖಂಡರಲ್ಲಿ ಒಬ್ಬರಾದ ಬಿ.ಆರ್‌.ಪಾಟೀಲ ಅವರಿಗೆ ಈ ಮಣ್ಣನ್ನು ನಾಳಿನ ಸಮಾರೋಪ‌ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಗುತ್ತದೆ.
ಏಪ್ರಿಲ್‌ 4ರಿಂದ 6ರವರೆಗೆ ಷಹಜಾನಪುರ, ಟಿಕ್ರಿ ಮತ್ತು ಸಿಂದ್‌ ಗಡಿಯಲ್ಲಿ ರೈತ ಸ್ಮಾರಕವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಅದಕ್ಕಾಗಿ ಕರ್ನಾಟಕದ ಹೋರಾಟದ ಮಣ್ಣನ್ನು ಕೂಡ ನೀಡುತ್ತಿದೆ. ರೈತರ ಮುಷ್ಕರಕ್ಕೆ ಬೆಂಬಲದ ಸಂಕೇತವಾಗಿ ಈ‌ ನಿರ್ಧಾರ ಕೈಗೊಂಡಿದೆ.
ಪಾದಯಾತ್ರೆಯು ತಾಲ್ಲೂಕಿನ ಕಕ್ಕಬೇವಿನಹಳ್ಳಿ ತಲುಪಿದ್ದು, ಸಂಜೆ ನಗರದ ಗಂಗಮ್ಮನವರ ಮಠದಲ್ಲಿ ವಿರಮಿಸಲಿದೆ.
ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಮಾಧವರೆಡ್ಡಿ, ಎಂ.ಶ್ರೀಹರಿ, ರೈತ ಸಂಘದ ಅಧ್ಯಕ್ಷ ಡಿ.ಜಿ,ಹಳ್ಳಿ ನಾರಾಯಣಸ್ವಾಮಿ, ಬಸವರಾಜಸ್ವಾಮಿ ಇಂದಿನ‌ ಪಾದಯಾತ್ರೆಯ ನೇತೃತ್ವ ವಹಿಸಿಕೊಂಡಿದ್ದಾರೆ.