ದೆವ್ವ ಬಿಡಿಸೋ ಶಿಕ್ಷಕನಿಗೆ ಚಳಿ ಬಿಡಿಸಿದ ಅಥಣಿ ಬಿಇಓ ತಳವಾರವಾಮಾಚಾರ ಮಾಡುತ್ತಿದ್ದ ಶಿಕ್ಷಕನ ಅಮಾನತ್ತು

ಅಥಣಿ :ನ.6: ರಾಜ್ಯ ಸರ್ಕಾರ ಮೌಢ್ಯತೆಯ ವಿರುದ್ಧ ಕಾನೂನು ಜಾರಿಗೊಳಿಸಿದ್ದರು ಕೂಡ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ವಾಮಾಚಾರದ ಪ್ರಕರಣಗಳು ನಡೆಯುತ್ತಲಿವೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಕಮರಿ ಗ್ರಾಮದ ಅನುದಾನಿತ ಶಾಲೆಯ ಶಿಕ್ಷಕನೋರ್ವ ವಾಮಾಚಾರ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ವಿಷಯದ ಬಗ್ಗೆ ಮಾಹಿತಿ ಪಡೆದುಕೊಂಡ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶನಿವಾರ ಕಕಮರಿ ಗ್ರಾಮದ ಶ್ರೀ ಅಮ್ಮಾಜೇಶ್ವರಿ ಪ್ರೌಢಶಾಲೆಗೆ ಭೇಟಿ ನೀಡಿ ಕೂಲಂಕುಶವಾಗಿ ವಿಚಾರಣೆ ನಡೆಸಿದ್ದು, ಅಲ್ಲಿನ ಚಿತ್ರಕಲಾ ಶಿಕ್ಷಕ ಎ ಎಸ್ ಘಡಾಲೋಟಿ, ಕಳೆದ ಹಲವು ವರ್ಷಗಳಿಂದ ಪ್ರತಿ ರವಿವಾರ ಮನುಷ್ಯರ ಮೇಲೆ ಬರುವ ದೆವ್ವ ಬಿಡಿಸುವುದು , ದೇವರು ಹೇಳುವುದು ಮತ್ತು ವಾಮಾಚಾರ ಕಾರ್ಯಗಳಲ್ಲಿ ತೊಡಗಿರುವುದನ್ನು ಸ್ವತಃ ಆರೋಪಿತ ಶಿಕ್ಷಕ ಒಪ್ಪಿಕೊಂಡಿರುತ್ತಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಯ ಆಡಳಿತ ಮಂಡಳಿಯ ಸ್ಥಾನಿಕ ಅಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಹಾಗೂ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರ ಸಮ್ಮಖದಲ್ಲಿ ವಿಚಾರಣೆಯನ್ನು ಕೈಗೊಂಡಿದ್ದಾರೆ. ಸದರಿ ಶಿಕ್ಷಕ ಪ್ರತಿ ರವಿವಾರ ವಾಮಾಚಾರ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಅವರು ಈ ಚಿತ್ರಕಲಾ ಶಿಕ್ಷಕರ ಚಿತ್ರ ವಿಚಿತ್ರ ವರ್ತನೆ, ದೆವ್ವ ಬಿಡಿಸುವದು, ದೇವರ ಹೆಸರಿನಲ್ಲಿ ವಾಮಾಚಾರ ಮಾಡುವುದು ಕಾನೂನು ವಿರುದ್ಧ ಮತ್ತು ಶಿಕ್ಷಣ ಇಲಾಖೆಯ ನಿಯಮಗಳ ವಿರುದ್ಧವಾಗಿದೆ ಎಂದು ಎಚ್ಚರಿಕೆಯ ಪಾಠ ಹೇಳುವ ಮೂಲಕ ಶಿಕ್ಷಕನಿಗೆ ಹಿಡಿದಿರುವ ವಾಮಾಚಾರ ಎಂಬ ದೆವ್ವ ಬಿಡಿಸುವ ಕಾರ್ಯವನ್ನು ಮಾಡಿದ್ದಾರೆ.
ಸದರಿ ಶಿಕ್ಷಕ ಶಿಕ್ಷಣ ಇಲಾಖೆಯ ಸೇವಾ ನಿಯಮಗಳಿಗೆ ವಿರುದ್ಧವಾಗಿ 1983 ರ ಶಿಕ್ಷಣ ಕಾಯ್ದೆಯ ವಿರುದ್ಧವಾಗಿ ನೌಕರರ ನಡತೆ ನಿಯಮಗಳ ವಿರುದ್ಧವಾಗಿ ವರ್ತಿಸಿದ್ದು ಮೇಲ್ನೋಟಕ್ಕೆ ಸಾಬೀತಾಗಿರುವದೆ. ಆದ್ದರಿಂದ ಸದರಿ ಶಿಕ್ಷಕನ ವರ್ತನೆ ಮಕ್ಕಳ ಮೇಲೆ ಮತ್ತು ಸಮಾಜದ ಮೇಲೆ , ಶಾಲಾ ಶೈಕ್ಷಣಿಕ ಹಿತದೃಷ್ಟಿಯ ಮೇಲೆ ದುಷ್ಪರಿಣಾಮ ಬಿರುವುದರಿಂದ , ಸದರಿ ಆರೋಪಿತ ಶಿಕ್ಷಕರ ನಡವಳಿಕೆ ಹಾಗೂ ವರ್ತನೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಲಾಗಿದೆ.
ಆರೋಪಿತ ಶಿಕ್ಷಕ ಶ್ರೀ ಅಮ್ಮಾಜೇಶ್ವರಿ ಪ್ರೌಢಶಾಲೆ ಕಕಮರಿಯ ಅನುದಾನಿತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು , ತಮ್ಮ ಆಡಳಿತ ಮಂಡಳಿಯ ಅಧೀನದಲ್ಲಿ ಬರುವ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಇದೊಂದು ಗಂಭಿರ ಮತ್ತು ಸಮಾಜದ ಸ್ವಾಸ್ಥ್ಯ ಕೆಡಿಸುವ ಘಟನೆಯಾಗಿದೆ. ಚಿಕ್ಕೋಡಿ ಡಿಡಿಪಿಐ ಅವರ ಪತ್ರದಲ್ಲಿ ಸದರಿ ಶಿಕ್ಷಕರ ಮೇಲೆ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲು ತಿಳಿಸಿದ್ದರಿಂದ ಸದರಿ ಶಿಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸಿ ಸೇವೆಯಿಂದ ವಜಾ ಮಾಡಿ ಕಚೇರಿಗೆ ವರದಿ ಸಲ್ಲಿಸಲು ಪ್ರೌಢ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಿಗೆ ಮತ್ತು ಮುಖ್ಯೋಪಾಧ್ಯಾಯರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶಿಸಿದ್ದರು. ಅದರಂತೆ ಆಡಳಿತ ಮಂಡಳಿಯ ಸದಸ್ಯರು ಸದರಿ ಶಿಕ್ಷಕನನ್ನು ಸೇವೆಯಿಂದ ವಜಾ ಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.


ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಮತ್ತು ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಬೇಕಾದ ಶಿಕ್ಷಕನೋರ್ವ ಮಕ್ಕಳು, ಮಹಿಳೆಯರ ಮೇಲೆ ದುಷ್ಪರಿಣಾಮ ಬೀರುವಂತಹ ವಾಮಾಚಾರ ಮಾಡುವುದು, ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿರುವ ಶಿಕ್ಷಣ ಇಲಾಖೆಗೆ ಕಪ್ಪು ಚುಕ್ಕೆಯಾಗಿದೆ.