ದೃಶ್ಯ ಕಲಾವಿದರಿಗೆ ಸಮಾಜದಲ್ಲಿ ಒಳ್ಳೆಯ ಗೌರವ ಸಿಗಬೇಕು–ಡಾ.ಮಹಾಂತೇಶ ಪಾಟೀಲ

ಸಂಜೆವಾಣಿ ವಾರ್ತೆ

ದಾವಣಗೆರೆ.ಜೂ.೧; ದಾ ವಿ ವಿಯ ರಾಷ್ಟ್ರೀಯ ಸೇವಾ ಯೋಜನಾ ವಿಭಾಗ ಮತ್ತು ರಾ ಸೇ ಯೋ ಘಟಕ ವಿ ವಿ ದೃಶ್ಯ ಕಲಾ ಮಹಾವಿದ್ಯಾಲಯ ದಾವಣಗೆರೆ ಇವುಗಳ ಸಹಯೋಗದಲ್ಲಿ ಏರ್ಪಡಿಸಿರುವ ವಾರ್ಷಿಕ ಶಿಬಿರ”ಭಿತ್ತಿ ಚಿತ್ರ ಕಲಾ ಶಿಬಿರ”ದ ಅಂಗವಾಗಿ ನಡೆದ ವಿಶೇಷ ಉಪನ್ಯಾಸ ಕಾರ್ಯ ಕ್ರಮದಲ್ಲಿ  ದಾ ವಿ ವಿ ಯ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಹಾಂತೇಶ ಪಾಟೀಲ ಉಪನ್ಯಾಸಕರಾಗಿ ಭಾಗವಹಿಸಿ,”ಪ್ರತಿಭೆ ಮತ್ತು ಕಲಾಭಿವ್ಯಕ್ತಿ” ವಿಷಯದ ಕುರಿತು ಮಾತನಾಡಿದರು.’ಪ್ರತಿಭೆ ಎಲ್ಲರಲ್ಲೂ ಇರುತ್ತದೆಯಾದರೂ  ಕವಿ,ಕಲಾವಿದರ ಪ್ರತಿಭೆಗೂ ಸಾಮಾನ್ಯರ ಪ್ರತಿಭೆಗೂ ವ್ಯತ್ಯಾಸ ಇದ್ದಿರುತ್ತದೆ.ಸಾಮಾನ್ಯರಲ್ಲಿ ಪ್ಲತಿಭೆ  ಉದಯಿಸಿದಕೆಲವೇ ಕ್ಷಣದಲ್ಲಿ  ಯಾವುದೇ ಮಾಧ್ಯಮದಲ್ಲೂ ಯಾವುದೇ ರೂಪದಲ್ಲೂ ತೋರದೇ ಅದೃಶ್ಯವಾಗುತ್ತದೆ‌.ಆದರೆ ಕವಿ ,ಕಲಾವಿದರ ಪ್ರತಿಭೆ ಬಹಳ ಸಮಯದ ತನಕವೂ ತೀವ್ರವಾಗಿ ಇದ್ದಿರುತ್ತದೆ ಹಾಗೂ ಯಾವುದಾದರೂ ಸೂಕ್ತ ಮಾಧ್ಯಮದಲ್ಲಿ ಕತೆ,ಕವನ,ಕಾದಂಬರಿಯಾಗಿಯೋ,ದೃಶ್ಯ ಕಲಾವಿದರಾದರೆ ಅವರ ಇಷ್ಟ ಮಾಧ್ಯಮದಲ್ಲಿ ಕಲಾಕೃತಿಯಾಗಿಯೋ ರೂಪು ತಳೆಯುತ್ತದೆ. ಪ್ರತಿಭೆ ಹಾಗೂ ಕಲಾಭಿವ್ಯಕ್ತಿ ಸಾಮರ್ಥ್ಯ ಒಂದು   ವಿಶೇಷತರ ಸಾಮರ್ಥ್ಯವೇ ಸರಿ. ಕವಿ, ಕಲಾವಿದರಲ್ಲಿ ಮಾನವೀಯ ಸಂವೇದನಾಶೀಲತೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಮಾನವೀಯ ಸಂವೇದನೆ ಇಂದಿನ ಸಮಾಜದಲ್ಲಿ ಕಡಿಮೆ ಆಗುತ್ತಿರುವ ಈ ಸನ್ನಿವೇಶದಲ್ಲಿ ಕವಿತ್ವ,ಕಲಾಭಿವ್ಯಕ್ತಿ ಯಂತಹ ಮಾನವೀಯ ಸಂವೇದನಾಶೀಲತ್ವವನ್ನು ಹೆಚ್ಚು ಮಾಡುವ ಸಾಮರ್ಥ್ಯ ಇರುವ.ಕಲೆ ಕಲಿಕೆಯನ್ನುಎಲ್ಲಾ ಸ್ತರದ ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸುವ ಅಗತ್ಯವಿದೆ. ಅಲ್ಲದೆ, ದೃಶ್ಯ ಕಲಾವಿದನೊಬ್ಬ ರಾಷ್ಟ್ರೀಯ ಪ್ರಶಸ್ತಿ ಪಡೆದರೆ ಅದು ದೊಡ್ಡ ಸುದ್ದಿ ಆಗುವುದೇ ಇಲ್ಲ, ಆದರೆ ಸಂಗೀತಗಾರ,ನಾಟಕಕಾರ ಅಂತಹ ಪ್ರಶಸ್ತಿ ಪಡೆದರೆ ದೊಡ್ಡ ಸುದ್ದಿಯಾಗುತ್ತದೆ. ಆ ತಾರತಮ್ಯ ಹೋಗಬೇಕು’ಎಂದರು.ದಾವಣಗೆರೆಯ ಎ. ವಿ.ಕೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಣಧೀರ ಮುಖ್ಯ ಅತಿಥಿಯಾ ಗಿ ಮಾತನಾಡಿ,’ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದಲ್ಲಿ ವಿದ್ಯಾರ್ಥಿಗಳು ಮನಃ ಪೂರ್ವಕ ಭಾಗವಹಿಸಬೇಕು. ಅಲ್ಲದೆ, ಇಂತಹ ಶಿಬಿರದಲ್ಲಿ ದೇಶದ ರಾಜಕೀಯ, ಸಾಮಾಜಿಕ ಭ್ರಷ್ಟಾಚಾರಗಳ ವಿರುದ್ಧ ಯುವಜನತೆ ಆತ್ಮ ಸ್ಥೈರ್ಯದಿಂದ ಎದ್ದು ನಿಲ್ಲುವ ಅಂತಃಸ್ಸತ್ವವನ್ನು ಉತ್ತೇಜಿಸುಶ ಕೆಲಸ ಆಗಬೇಕು. ಇಂದಿನ ಯುವ ಪೀಳಿಗೆಗೆ ಸಾಮಾಜಿಕ, ರಾಜಕೀಯ ಅವ್ಯವಸ್ಥೆ, ದುರವಸ್ಥೆ ವಿರುದ್ಧ ಹೋರಾಡುವ ಮನೋಬಲವೇ ಇಲ್ಲವಾಗಿದ್ದು,ಇದು ಭವಿಷ್ಯದ ಭವ್ಯ ಭಾರತ ಕ್ಕೆ ಬಹಳ ಅಪಾಯಕಾರಿ. ಹಾಗಾಗಿ ಇಂತಹ ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಆ ನಿಟ್ಟಿನಲ್ಲಿ ಕೂಡಾ ಸಮರ್ಪಕವಾಗಿ ಮಾರ್ಗ ದರ್ಶನ ದೊರೆಯಬೇಕು ಎಂದರು.