ದೃಶ್ಯಕಲಾ ಕಾಲೇಜಿನಲ್ಲಿ ಜೂ.೧೪ ರಿಂದ ಅಕ್ಷರ ಸಿಂಗಾರೋತ್ಸವ

ಸಂಜೆವಾಣಿ ವಾರ್ತೆ

ದಾವಣಗೆರೆ.ಜೂ.೧೧: ದಾಕಹವಿಸ ಮತ್ತು ದಾವಣಗೆರೆ ವಿಶ್ವವಿದ್ಯಾಲಯ, ದೃಶ್ಯಕಲಾ ಮಹಾವಿದ್ಯಾಲಯದ ಸಹಯೋಗದಲ್ಲಿ ಇದೇ ಜೂ.೧೪ ರಿಂದ ೨೮ ರ ವರೆಗೆ ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಅಕ್ಷರ ಸಿಂಗಾರೋತ್ಸವ-೩ ಕನ್ನಡ ಅಕ್ಷರ ಕಲಾಕೃತಿಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಭೋದನ ಸಹಾಯಕ ದತ್ತಾತ್ರೆಯ ಎನ್.ಭಟ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ೪.೩೦ಕ್ಕೆ ಪ.ಸ.ಕುಮಾರ, ನಿಯೋಜಿತ ಅಧ್ಯಕ್ಷರು, ಕರ್ನಾಟಕ ಲಲಿತಕಲಾ ಅಕಾಡೆಮಿ ಇವರು ಉದ್ಘಾಟಕರಾಗಿ,ಡಾ.ಜೈರಾಜ.ಎಂ.ಚಿಕ್ಕಪಾಟೀಲ, ಪ್ರಾಚಾರ್ಯರು, ದೃಶ್ಯಕಲಾ ಮಹಾವಿದ್ಯಾಲಯ,  ಇವರು ಅಧ್ಯಕ್ಷರಾಗಿ, ಡಾ.ಸತೀಶಕುಮಾರ್ ಪಿ ವಲ್ಲೇಪುರೆ, ಸಹಾಯಕ ಪ್ರಾಧ್ಯಾಪಕರು, ಚಿತ್ರಕಲಾ ವಿಭಾಗ, ದೃಶ್ಯಕಲಾ ಮಹಾವಿದ್ಯಾಲಯ,  ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.ಅಕ್ಷರ ಸಿಂಗಾರೋತ್ಸವ ಕನ್ನಡ ಅಕ್ಷರಗಳಿಗೆ ಸುಂದರ, ಕಲಾತ್ಮಕ, ಲಿಪಿಗಾರಿಕೆಯ ಮೆರಗನ್ನು ನೀಡಿ, ಆ ಮೂಲಕ ಕನ್ನಡ ಅಕ್ಷರಗಳನ್ನು ಕನ್ನಡಿಗರಾದ ನಾವು ಬೆರಗಾಗಿ ಖುಷಿ ಪಟ್ಟು, ಪ್ರೀತಿಸಿ ಕನ್ನಡ ಅಕ್ಷರ ಪ್ರೀತಿಯ ಜೊತೆಗೆ ಕನ್ನಡ ಭಾಷೆ ಸಂಸ್ಕೃತಿಯನ್ನು ಸಹ ಪ್ರೀತಿಸಲು ನಮ್ಮನ್ನು ಉತ್ತೇಜಿಸುವ ಆಸೆಯನ್ನು ಹೊಂದಿರುವ ಸಮಾನ ಮನಸ್ಕ ಕಲಾವಿದರುಗಳ ಗುಂಪಾಗಿದೆ.  ಸುರೇಶ್ ವಾಘೋರೆ, ಅನಿಮೀಶ್ ನಾಗನೂರು, ಮೋಹನ್‌ಕುಮಾರ್ ಈರಪ್ಪ, ಟಿ.ಬಿ.ಕೋಡಿಹಳ್ಳಿ, ಜಿ.ಹರಿಕುಮಾರ್, ನಾಗೇಂದ್ರ ಆಚಾರ್ಯ, ಶ್ವೇತ.ಎನ್, ಪ್ರಸನ್ನ ರೇವನ್ ಇದರ ಸದಸ್ಯ ಕಲಾವಿದರು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಹಾವಿದ್ಯಾಲಯದ ಪ್ರಮೋದ್ ಆಚಾರ್, ಹರೀಶ್, ನವೀನ್ ಕುಮಾರ್ ಇದ್ದರು.