
ಗುಳೇದಗುಡ್ಡ ಏ.14: ಸರಕಾರದ ಇಲಾಖೆಗಳಲ್ಲಿ ನಡೆಯುವ ಭ್ರಷ್ಟಾಚಾರವನ್ನು ನಿಗ್ರಹಿಸಲು ಲೋಕಾಯುಕ್ತವು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾರ್ವಜನಿಕರು ತಮ್ಮ ದೂರುಗಳನ್ನು ಯಾವುದೇ ಹೆದರಿಕೆ ಇಲ್ಲದೇ ಲೋಕಾಯುಕ್ತಕ್ಕೆ ನೀಡಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ ಎನ್ ಹೇಳಿದರು.
ಅವರು ಇಲ್ಲಿನ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಅವಕಾಶನೀಡದೇ ಸಾರ್ವಜನಿಕರ ಕೆಲಸಕಾರ್ಯಗಳನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಯಾವುದೇ ಅಹವಾಲುಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಲಿಲ್ಲ.
ಈ ಸಂದರ್ಭದಲ್ಲಿ ಸಿಪಿಐ ಎಂ.ಎಚ್.ಬಿದರಿ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಮಲ್ಲಿಕಾರ್ಜುನ ಕಲಾದಗಿ, ವಿವಿಧ ಇಲಾಖೆಗಳ ಅಧಿಕಾರಿಗಳಾದ ರಾಮಚಂದ್ರ ಮೇತ್ರಿ, ಎಸ್.ಬಿ. ಹಡಪದ, ಎಸ್.ಆರ್. ಬಸರಕೋಡ, ವೀರೇಶ, ಎಂ.ಎಸ್. ಬಗಾಡಿ, ಡಾ. ಎಂ.ಬಿ. ಪಾಟೀಲ, ಸುರೇಶ ಕಿರಗಿ, ಎಸ್.ಸಿ. ವಡ್ಡವಡಗಿ, ಎಸ್.ಬಿ. ಪೂಜಾರ, ಶಿವಕುಮಾರ ರಾಜನಾಳ ಮತ್ತಿತರರಿದ್ದರು.