ದೂರುಗಳನ್ನು ಗಂಭೀರವಾಗಿ ಪರಿಗಣಿಸಿ

ದೇವದುರ್ಗ,ಜು.೧೩-
ಪ್ರತಿಇಲಾಖೆ ಕಚೇರಿ ಮುಂದೆ ಲೋಕಾಯುಕ್ತರ ಸಹಾಯವಾಣಿ ಹೊಂದಿರುವ ಕರಪತ್ರದ ಅಂಟಿಸಬೇಕು. ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಇತ್ಯಾರ್ಥ ಮಾಡಬೇಕು ಎಂದು ಲೋಕಾಯುಕ್ತ ಇಲಾಖೆ ಪೊಲೀಸ್ ವರಿಷ್ಠಾಧಿಕಾರಿ ಎಲ್.ರಾಮ ಅರಸದಿ ಸೂಚಿಸಿದರು.
ಪಟ್ಟಣದ ಮಿನಿವಿಧಾನಸೌಧದಲ್ಲಿ ಲೋಕಾಯುಕ್ತ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಅಹವಾಲು ಸ್ವೀಕಾರ ಸಮಾರಂಭದ ಅಧ್ಯಕ್ಷತೆವಹಿಸಿ ಬುಧವಾರ ಮಾತನಾಡದರು. ಪ್ರತಿನಿತ್ಯ ನಮಗೆ ಇಲಾಖೆಗಳ ಕಾರ್ಯವೈಕರಿಗೆ ಬಗ್ಗೆ ದೂರುಗಳು ಬರುತ್ತಿವೆ. ಲೋಕಾಯುಕ್ತರ ಕರ್ತವ್ಯ, ಇಲಾಖೆ ಬಗ್ಗೆ ಜನರಿಗೆ ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸಾರ್ವಜನಿಕರು ದೂರು ನೀಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು.
ಎಲ್ಲ ತಾಲೂಕು ಕೇಂದ್ರಗಳಿಗೆ ಭೇಟಿನೀಡಿ ಸಾರ್ವಜನಿಕರು ದೂರುಆಲಿಸುತ್ತೇವೆ. ಜನರು ಲಿಖಿತ ರೂಪದಲ್ಲಿ ದೂರು ನೀಡಬೇಕು. ದೂರು ಸ್ವೀಕರಿಸಲು ಯಾವುದೇ ಫೀಸ್ ಇರುವುದಿಲ್ಲ. ಇದನ್ನು ಜನರು ಅರಿತುಗೊಳ್ಳಬೇಕು. ನಮಗೆ ಬಹುತೇಕ ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಗ್ರಾಮೀಣ ಅಭಿವೃದ್ಧಿ, ಕುಡಿವ ನೀರು, ಗ್ರಾಪಂ ಅಧಿಕಾರಿಗಳ ವಿರುದ್ಧ ದೂರುಗಳು ಬರುತ್ತಿವೆ. ಪಿಡಿಒಗಳು, ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಪ್ರಗತಿಪರ ಮುಖಂಡ ಬಸವರಾಜ ನಾಯಕ ಅರ್ಜಿ ಸಲ್ಲಿಸಿ, ಪಟ್ಟಣದಲ್ಲಿ ಸುಮಾರು ೨೯ಎಕರೆ ಜಾಗ ಕೈಗಾರಿಕೆಗಾಗಿ ವಶಕ್ಕೆ ಪಡೆದಿದ್ದು ರಕ್ಷಣೆ ಇಲ್ಲದೆ ಉಳ್ಳವರ ಪಾಲಾಗುತ್ತಿದೆ ಎಂದು ದೂರಿದರು. ದಾಖಲೆ ಪ್ರಕಾರ ಮುಂದಿನಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುತ್ತೇವೆ. ಸರ್ಕಾರದ ಯಾವುದೇ ಜಾಗ ಒತ್ತುವರಿ ಮಾಡಿದರೆ ತೆರವು ಮಾಡಲಾಗುವುದು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್ ಮಾತನಾಡಿ, ತಾಲೂಕಿನ ಅಧಿಕಾರಿಗಳು ಕೆಲಸಕ್ಕೆ ಸರಿಯಾಗಿ ಬರುತ್ತಿಲ್ಲ. ಇಲಾಖೆಗಳಲ್ಲಿ ಸಿಸಿ ಕ್ಯಾಮರಾ ಇಲ್ಲ. ಪಿಡಿಒಗಳು ಕೈಗೆಸಿಗುತ್ತಿಲ್ಲ ಎಂದು ಮೌಖಿಕ ದೂರುಸಲ್ಲಿಸಿದರು.
ಲೋಕಾಯುಕ್ತ ಎಸ್ಪಿ ಎಲ್.ರಾಮ ಮಾತನಾಡಿ, ನಿರ್ಧಿಷ್ಟವಾಗಿ ಯಾವ ಇಲಾಖೆ, ಯಾವ ಅಧಿಕಾರಿ ಇಂಥ ಕೆಲಸ ಮಾಡುತ್ತಾರೆ ಎನ್ನುವ ಬಗ್ಗೆ ಲಿಖಿತ ದೂರು ನೀಡಿ ಕ್ರಮಕೈಗೊಳ್ಳುತ್ತೇವೆ ಎಂದರು. ಇನ್ಸ್‌ಪೆಕ್ಟ್ ಜಿ.ಎಂ.ಪಾಟೀಲ್, ತಹಸೀಲ್ದಾರ್ ಕೆ.ವೈ.ಬಿದರಿ, ಗ್ರೇಡ್-೨ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್, ಸಿಪಿಐ ಖಾಜಾ ಹುಸೇನ್ ಇತರರಿದ್ದರು.