ದೂರದೃಷ್ಟಿ ಇದ್ದಾಗ ಮಾತ್ರ ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯ; ಪ್ರೊ..ಶರಣಬಸಪ್ಪ ಬಿಳಿಎಲೆ

ಕೊಪ್ಪಳ, ಜು-11;-ಒಂದು ಪ್ರದೇಶ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿಯಾಗಬೇಕೆಂದೆರೆ ದೂರದೃಷ್ಟಿಯ ಅಲೋಚನೆಗಳಿರಬೇಕು, ಅಂದಾಗ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದು ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಪಕರಾದ ಪ್ರೊ.ಶರಣಬಸಪ್ಪ ಬಿಳಿಎಲೆಯವರು ನುಡಿದರು. ಅವರು ಶಕ್ತಿ ಶಾರದೆ ಮೇಳ ಮತ್ತು ಬೆರಗು ಪ್ರಕಾಶನಗಳ ಆಶ್ರಯದಲ್ಲಿ ನಡೆದ ವಿಚಾರ ಮಂಥನ ಕೂಟ 44ನೇ ಕಾರ್ಯಕ್ರಮದಲ್ಲಿ ‘ನಮ್ಮ ಕೊಪ್ಪಳ ಅಂದು-ಇಂದು-ಮುಂದು’ ಎಂಬ ವಿಷಯದ ಮೇಲೆ ನಡೆದ ಚರ್ಚೆಯಲ್ಲಿ ‘ನಮ್ಮ ಕೊಪ್ಪಳ ಮುಂದೆ’ ಎನ್ನುವ ವಿಷಯದ ಮೇಲೆ ಮಾತನಾಡುತ್ತಾ ನುಡಿದರು. ಇಲ್ಲಿನ ಜನರು ಆರ್ಥಿಕ ಮತ್ತು ಮತ್ತು ಆರ್ಥಿಕೇತರ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ. ಅರ್ಥವ್ಯವಸ್ಥೆಯಲ್ಲಿನ ಸೌಲಭ್ಯಗಳನ್ನು ಬಳಸಿಕೊಳ್ಳುವ ಜನರ ಮನೋಭಾವನೆಗಳು ಮೊದಲು ಬದಲಾಗಬೇಕಿದೆ. ಅಂದಾಗ ಮಾತ್ರ ಈ ಪ್ರದೇಶ ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ನಮ್ಮ ಕೊಪ್ಪಳ ಕೃಷಿ ಪ್ರದಾನವಾಗಿದ್ದರೂ ಇಂದು ತೋಟಗಾರಿಕೆಯ ಕಡೆಗೆ ಸಾಗುತ್ತಿರುವುದು ಆರೋಗ್ಯಕರ ಬೆಳವಣಿಗೆ. ಯುವಕರು ಹೆಚ್ಚಿನ ಮಟ್ಟದಲ್ಲಿ ಕೌಶಲ್ಯಗಳನ್ನು ಬಳಸಿಕೊಂಡು ಉದ್ಯೋಗದಲ್ಲಿ ತೊಡಗಿದಾಗ ಮಾತ್ರ ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದು ನುಡಿದರು. ‘ನಮ್ಮ ಕೊಪ್ಪಳ ಇಂದು’ ಎಂಬ ವಿಷಯದ ಮೇಲೆ ಮಾತನಾಡಿ ಹೋರಾಟಗಾರರಾದ ಮಹಾಂತೇಶ ಕೊತಬಾಳರವರು ಕೊಪ್ಪಳ ಪ್ರದೇಶ ಅನೇಕ ಹೋರಾಟಗಳನ್ನು ಕಂಡಿದೆ. ಇಂದಿನ ಕೊಪ್ಪಳದ ಅಭಿವೃದ್ಧಿ ಯಾವುದಕ್ಕೂ ಸಾಲದು. ಹೋರಾಟಗಾರರು, ಪ್ರಗತಿಪರರು ಇನ್ನೂ ಹೆಚ್ಚಿನ ರೀತಿಯಲ್ಲಿ ಹೋರಾಟ ಮಾಡಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಆಗ ನಮ್ಮ ಕೊಪ್ಪಳ ಇನ್ನಷ್ಟು ಅಭಿವೃದ್ಧಿಯಾಗುತ್ತೆ ಎಂದರು. ‘ನಮ್ಮ ಕೊಪ್ಪಳ ಅಂದು’ ಎಂಬ ವಿಷಯದ ಮೇಲೆ ಮಾತನಾಡಿದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್‍ರವರು ಕೊಪ್ಪಳವು ಭವ್ಯ ಪರಂಪರೆಯನ್ನು ಹೊಂದಿದೆ. ಸಾವಿರಾರು ವರ್ಷಗಳಿಂದಲೂ ಕೊಪ್ಪಳದ ಚರಿತ್ರೆ ತನ್ನದೇ ಆದ ಮಹತ್ವವನ್ನು ಪಡೆಯುತ್ತಾ ಬಂದಿದೆ. ಇಲ್ಲಿನ ಶಾಸನ, ಸ್ಮಾರಕ, ಮೂರ್ತಿ-ಶಿಲ್ಪಗಳು, ಶಿಲಾಸಮಾಧಿಗಳು ನಾಡಿನಲ್ಲೇ ವಿಶಿಷ್ಟವಾದವುಗಳಾಗಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಅಂದಾನಪ್ಪ ಬೆಣಕಲ್‍ರವರು ಕೊಪ್ಪಳದ ಸಂಸ್ಕøತಿ ಭವ್ಯವಾಗಿದೆ. ಇದು ಇಂದು ನಿನ್ನೆ ಮೊನ್ನೆಯಿಂದ ನಿರ್ಮಾಣವಾದುದಲ್ಲ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂತಹ ಭವ್ಯ ಚರಿತ್ರೆಯನ್ನು ಉಳಿಸಿಕೊಂಡು ಹೋಗಬೇಕಿದೆ ಎಂದರು. ಪವನಕುಮಾರ ಕಮ್ಮಾರ ಕಾರ್ಯಕ್ರಮ ನೆರವೆರಿಸಿದರು. ಈ ಕಾರ್ಯಕ್ರಮದಲ್ಲಿ ಸಂಘಟಕರಾದ ಡಿ.ಎಂ.ಬಡಿಗೇರಾ ಉಪಸ್ಥಿತರಿದ್ದರು.