ದೂರದರ್ಶನ ಫಸ್ಟ್ ಲುಕ್ ಬಿಡುಗಡೆ

ವಿಭಿನ್ನ ಕಥಾಹಂದರ ಹೊಂದಿರುವ “ದೂರದರ್ಶನ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಹಳ್ಳಿ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಪೋಸ್ಟರ್ ನಲ್ಲಿ ಪೃಥ್ವಿ ಅಂಬರ್, ಉಗ್ರಂ ಮಂಜು, ಹರಿಣಿ, ಸುಂದರ್ ವೀಣಾ, ಆಯಾನ ಕಾಣಿಸಿಕೊಂಡಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ.

ಚಿತ್ರಕ್ಕೆ ಸುಕೇಶ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ಈ ವೇಳೆ ಮಾತನಾಡಿದ ಸುಕೇಶ್ ಶೆಟ್ಟಿ, 1980ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಹಿರಿಯರ ಜೊತೆ ಅನುಭವಿಸಿ, ಕಳೆದು ಹೋದ, ನಾವು ನೋಡಿರುವ, ಕೇಳಿರುವ ಮಾಹಿತಿ ಕಲೆ ಹಾಕಿ ಕಥೆಯನ್ನು ತೆರೆಯ ಮೇಲೆ ಕಟ್ಟಿಕೊಡಲಾಗಿದೆ.

ಟಿವಿ ಸುತ್ತ ನಡೆಯುವ ಕಥೆ ನಡೆಯುತ್ತದೆ. ಪೃಥ್ವಿ, ಉಗ್ರಂ ಮಂಜು ಹೀಗೆ ಪ್ರತಿಯೊಬ್ಬರನ್ನು ಬೇರೆಯೇ ರೀತಿ ನೋಡಬಹುದು. 1980 ಕಾಲಘಟ್ಟ ಅಂದ್ರೆ ರೆಟ್ರೋ ಅಂದುಕೊಳ್ತಾರೆ. ನೈಜವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ ಎಂದರು.

ನಾಯಕ ಪೃಥ್ವಿ ಅಂಬರ್ ಮಾತನಾಡಿ, ಹಳ್ಳಿಯಲ್ಲಿ ಹುಟ್ಟಿದವನು ಮನೆಗೆ ಟಿವಿ ಬರುವ ಮೊದಲು ಬೇರೆಯವರ ಮನೆಗೆ ಟಿವಿ ನೋಡಲು ಹೋಗುತ್ತಿದ್ದೆವು. ಆ ಬಳಿಕ ನಮ್ಮ ಮನೆಗೆ ಕಲರ್ ಟಿವಿ ಬಂತು. ಆ ದಿನಗಳು ನನಗೆ ಬಹಳ ಕಾಡಿದವು. ಸುಕೇಶ್  ಕಥೆ ಹೇಳಿದಾಗ ನಮ್ಮೂರ ಕಥೆ ಕೇಳಿದಾಗೇ ಆಯ್ತು.ಚಿತ್ರ ಮಾಡಲೇಬೇಕು ಎಂದು ಮಾಡಿದ್ದೇನೆ. 80ರ ದಶಕವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೇವೆ ಎಂದರು.