ದೂರದರ್ಶನ ಕೇಂದ್ರ ಡಿಜಿಟಲೀಕರಣಕ್ಕೆ ಆಗ್ರಹ

ಕಲಬುರಗಿ,ಜೂ.7: ನಗರದ ದೂರದರ್ಶನ ಕೇಂದ್ರವನ್ನು ಡಿಜಿಟಲೀಕರಣಗೊಳಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಸಿ.ಎಸ್. ಮಾಲಿಪಾಟೀಲ್ ಅವರು ರಾಜ್ಯದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಮನವಿ ಮಾಡಿದರು.
ನಗರದ ಆಕಾಶವಾಣಿ ಕೇಂದ್ರದಲ್ಲಿ ಬುಧವಾರ ನಿಯೋಗದ ಮೂಲಕ ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ವಿಭಾಗವನ್ನು ಈ ಹಿಂದೆ ಹೈದ್ರಾಬಾದ್ ಕರ್ನಾಟಕ ಪ್ರದೇಶವೆಂದು ಕರೆಯುತ್ತಿದ್ದು, ಈಗ ಅದು ಕಲ್ಯಾಣ ಕರ್ನಾಟಕವಾಗಿದೆ. ಮಾನ್ಯಖೇಟವು ನೃಪತುಂಗನ ಆಡಳಿತದಲ್ಲಿ ಸಾಂಸ್ಕøತಿಕ ಪ್ರದೇಶವೆಂದು ಆ ಕಾಲದಿಂದಲೂ ಕೂಡ ಸಂಗೀತ, ಸಾಹಿತ್ಯ, ಕಲೆ, ಸಾಂಸ್ಕøತಿಕ ಚಟುವಟಿಕೆಗಳಿಂದ ಬಹಳಷ್ಟು ಬೆಳೆದು ಬಂದ ಪ್ರದೇಶವನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
1977ರಲ್ಲಿ ಅಂದಿನ ಕೇಂದ್ರ ಸರ್ಕಾರವು ದಕ್ಷಿಣ ಭಾರತದಲ್ಲಿಯೇ ಕರ್ನಾಟಕ ರಾಜ್ಯದ ಕಲಬುರ್ಗಿ ಜಿಲ್ಲೆಗೆ ಮೊಟ್ಟ ಮೊದಲು ದೂರದರ್ಶನ ಕೇಂದ್ರವನ್ನು ಪ್ರಾರಂಭಿಸಲು ಅನುಮತಿ ನೀಡುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಕೇಂದ್ರವು ಡಿಡಿ 1 ರೈತರಿಗಾಗಿ ಕೃಷಿ ವ್ಯವಸಾಯಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ. ಅಷ್ಟೇ ಅಲ್ಲದೇ ಹಲವು ದಶಕಗಳಿಂದ ಕಲೆ, ಸಾಹಿತ್ಯ, ಸಾಂಸ್ಕøತಿಕ ಲೋಕದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಬಿತ್ತರಿಸಿ ದೂರದರ್ಶನ ಕೇಂದ್ರವು ಈ ಭಾಗದ ಜನರ ಜೀವನಾಡಿಯಾಗಿದೆ ಎಂದು ಅವರು ತಿಳಿಸಿದರು.
ಸುಮಾರು ಎರಡು ವರ್ಷಗಳಿಂದ ಕೇಂದ್ರ ಸರ್ಕಾರವು ಭಾರತದಲ್ಲಿರುವ ಕೆಲವೊಂದು ದೂರದರ್ಶನ ಕೇಂದ್ರಗಳನ್ನು ಮುಚ್ಚುವ ಆದೇಶ ಕಲಬುರ್ಗಿ ದೂರದರ್ಶನ ಕೇಂದ್ರಕ್ಕೂ ಬಂದಾಗ ಕರ್ನಾಟಕ ಜಾನಪದ ಪರಿಷತ್ ಪದಾಧಿಕಾರಿಗಳು ಹಾಗೂ ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ್ ಅವರೊಂದಿಗೆ ಹೋರಾಟಗಾರರಾದ ಸಚಿನ್ ಫರತಾಬಾದ್, ನಾರಾಯಣ್ ಜೋಶಿ ಹಾಗೂ ಅನೇಕ ಸಾಹಿತಿಗಳು, ಕಲಾವಿದರು, ಚಿತ್ರಕಲಾವಿದರು ಹೋರಾಟದಲ್ಲಿ ಪಾಲ್ಗೊಂಡು ಪ್ರಧಾನಿ ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವ ಡಾ. ಭಗವಂತ್ ಖೂಬಾ, ಹಿಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಂಸದ ಡಾ. ಉಮೇಶ್ ಜಾಧವ್, ಮುರುಗೇಶ್ ನಿರಾಣಿಯವರಿಗೂ ಮನವಿ ಪತ್ರ ಸಲ್ಲಿಸಲಾಗಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೂ ಸೇರಿದಂತೆ ಅನೇಕ ಮುಖಂಡರಿಗೂ ಮನವಿ ಸಲ್ಲಿಸಿದ ಮೇಲೆ ಕೇಂದ್ರ ಸರ್ಕಾರವು ಆದೇಶವನ್ನು ಹಿಂಪಡೆದಿದೆ. ಆದಾಗ್ಯೂ, ನಿಮಿತ್ಯವಾಗಿ ಉಳಿದ ದೂರದರ್ಶನ ಕೇಂದ್ರವು ಯಾವುದೇ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿಲ್ಲ. ಈಗಾಗಲೇ ಅನೇಕ ಜನ ಸಿಬ್ಬಂದಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಕೆಲವರು ನಿವೃತ್ತಿ ಹೊಂದಿದ್ದಾರೆ. ಸುಮಾರು ತಿಂಗಳಿಂದ ಯಾವುದೇ ಕಾರ್ಯಕ್ರಮಗಳು ದೂರದರ್ಶನ ಕೇಂದ್ರದಿಂದ ಬಿತ್ತರಗೊಳ್ಳುತ್ತಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮುಂಬರುವ ದಿನಗಳಲ್ಲಿ ಕಲಬುರ್ಗಿ ದೂರದರ್ಶನ ಕೇಂದ್ರವನ್ನು ಡಿಜಿಟಲೀಕರಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ರೋಣದ್, ಶ್ರೀಮತಿ ಸವಿತಾ ಹಿರೇಮಠ್, ಭಾನುಕುಮಾರ್ ಗಿರೇಗೋಳ್, ಮಹಾಲಕ್ಷ್ಮೀ ಪಾಟೀಲ್ ಮುಮತಾದವರು ಉಪಸ್ಥಿತರಿದ್ದರು.