ದೂಡಾದಿಂದ 159.17 ಕೋಟಿ ರೂ. ಆದಾಯ ನಿರೀಕ್ಷೆ

ದಾವಣಗೆರೆ,ಮಾ.೨೧: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ 2021-22ನೇ ಸಾಲಿನ ಯೋಜಿತ ಆಯವ್ಯಯ ಸಭೆ  ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಅವರ ಉಪಸ್ಥಿತಿಯಲ್ಲಿ ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ ಅವರು 159.17 ಕೋಟಿ ರೂ. ಗಳ ಆದಾಯದ ನಿರೀಕ್ಷೆಯಲ್ಲಿ 156.18 ಕೋಟಿ ರೂ. ಗಳ ನಿರೀಕ್ಷಿತ ವೆಚ್ಚದ 2021-22 ನೇ ಸಾಲಿನ ಆಯ-ವ್ಯಯ ಮಂಡಿಸಿದರು.      ದೂಡಾ 2021-22 ನೇ ಸಾಲಿನ ಆಯ-ವ್ಯಯದಲ್ಲಿ ಪ್ರಮುಖವಾಗಿ ಕುಂದುವಾಡ ಗ್ರಾಮದ ವಿವಿಧ ಸರ್ವೇ ನಂಬರುಗಳಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಜಮೀನು ಭೂ ಖರೀದಿ ಮಾಡಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ರೂ. 60 ಕೋಟಿ, ಮಾಸ್ಟರ್ ಪ್ಲಾನ್ ರಲ್ಲಿ ಕಾಯ್ದಿರಿಸಿರುವ ಉದ್ಯಾನವನ ಪ್ರದೇಶದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮತ್ತು ರಾಷ್ಟ್ರೀಯ ಉದ್ಯಾನವನ ಮತ್ತು ಮೃಗಾಲಯ ಅಭಿವೃದ್ಧಿ ಪಡಿಸಲು 10 ಕೋಟಿ ರೂ., ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 5.30 ಕೋಟಿ ರೂ., ಪ್ರಾಧಿಕಾರದ ಸಿಬ್ಬಂದಿಗಳಿಗೆ ವಸತಿ ಸಮುಚ್ಛಯ ಹಾಗೂ ಅತಿಥಿ ಗೃಹ ನಿರ್ಮಾಣಕ್ಕೆ 5 ಕೋಟಿ ರೂ.,  ದಾವಣಗೆರೆ ಹಾಗೂ ಹರಿಹರ ನಗರ ಮಧ್ಯ ಭಾಗದಲ್ಲಿ ಬರುವ ದೊಡ್ಡಬಾತಿ ಕೆರೆಯನ್ನು ವಿದ್ಯುದ್ದೀಕರಣಗೊಳಿಸಿ ಸಾರ್ವಜನಿಕರ ಪ್ರೇಕ್ಷಣಿಯ ಸ್ಥಳವಾಗಿ ಮತ್ತು ಪ್ರವಾಸೋದ್ಯಮ ಹಾಗೂ ಜಲಕ್ರೀಡೆ ನಡೆಸಲು ಅನುಕೂಲವಾಗುವಂತೆ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದ್ದು, ರೂ.8.00 ಕೋಟಿಗಳನ್ನು ಕಾಯ್ದಿರಿಸಲಾಗಿದೆ.      ಉಳಿದಂತೆ ಶಿರಮಗೊಂಡನಹಳ್ಳಿ ಪ್ರದೇಶದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಹೊಸದಾಗಿ ಒಳಚರಂಡಿ ಕಾಮಗಾರಿಗೆ 2 ಕೋಟಿ, ದಾವಣಗೆರೆ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿ ಸೈನಿಕರ ಉದ್ಯಾನವನಕ್ಕೆ ಹೆಚ್ಚುವರಿಯಾಗಿ ರೂ. 1 ಕೋಟಿ, ಜಿಲ್ಲಾಧಿಕಾರಿಗಳ ಕಚೇರಿಯಿಂದ ಕುಂದುವಾಡ ಕೆರೆ ಬಳಿ ಇರುವ ಎಂ.ಬಿ.ಎ ಕಾಲೇಜುವರೆಗೆ ದ್ವಿಪಥ ರಸ್ತೆಯ ಎರಡು ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇದಕ್ಕೆ ಮುಂದುವರೆದು ದಾವಣಗೆರೆ ನಗರ ನಿವಾಸಿಗಳ ಸುಗಮ ಸಂಚಾರಕ್ಕೆ ಎಂ.ಬಿ.ಎ. ಕಾಲೇಜು ಹಾಗೂ ಕುಂದುವಾಡ ಕೆರೆಯ ಮಧ್ಯ ಭಾಗದಿಂದ ಬೈಪಾಸ್ ರಸ್ತೆಯವರಿಗೆ ರೂ. 2 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೊಳಿಸಲು ಉದ್ದೇಶಿಸಲಾಗಿದೆ.ಜೆ.ಹೆಚ್.ಪಟೇಲ್ ಬಡಾವಣೆ ಅಭಿವೃದ್ಧಿ :ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ಹಾಳಾದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ರೂ.400 ಲಕ್ಷ, ಹೈಟೆನ್ಷನ್ ಲೈನ್ ಕೆಳಗಿರುವ ಬಫರ್ ಜೋನ್ ಗೆ ಚೈನ್ ಲಿಂಕ್ ಫೆನ್ಸಿಂಗ್ ಅಳವಡಿಸಿ ವಾಕಿಂಗ್ ಪಾತ್ ನಿರ್ಮಿಸಲು ರೂ.70 ಲಕ್ಷ, ವಿಭಜಕದಲ್ಲಿ 9 ಮೀ ಎತ್ತರದ ಅಕ್ಟೋಗನಲ್ ಕಂಬಗಳನ್ನು ಅಳವಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಲು ರೂ.40 ಲಕ್ಷ, ನಾಮಫಲಕದ ಕಮಾನು ನಿರ್ಮಿಸಲು ರೂ.20 ಲಕ್ಷ ಕಾಯ್ದಿರಿಸಲಾಗಿದೆ.ಸಭೆಯಲ್ಲಿ ದೂಡಾ ಸದಸ್ಯರಾದ ದೇವಿರಮ್ಮ ಆರ್.ಎಲ್., ಡಿ.ಎಲ್, ನಾಗರಾಜ ಎಂ. ರೋಖಡೆ, ಸೌಭಾಗ್ಯಮ್ಮ, ಡಿ.ವಿ.ಜಯರುದ್ರಪ್ಪ, ಹರಿಹರ ನಗರಸಭೆ ಪೌರಾಯುಕ್ತರು, ಪ್ರಾಧಿಕಾರದ ಜಂಟಿ ನಿರ್ದೇಶಕ, ಸಹಾಯಕ ನಿರ್ದೇಶಕ, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಹೆಚ್.ಶ್ರೀಕರ್, ಲೆಕ್ಕಪರಿಶೋಧನಾಧಿಕಾರಿ, ಇವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.