ದೂಡಾದಿಂದ ಪಾಲಿಕೆಗೆ ಜೆ. ಹೆಚ್. ಪಟೇಲ್ ಬಡಾವಣೆ ಹಸ್ತಾಂತರ 

ದಾವಣಗೆರೆ.ಮಾ.೨೯; ದಾವಣಗೆರೆ – ಹರಿಹರ ಸ್ಥಳೀಯ ಯೋಜನಾ ಪ್ರದೇಶಕ್ಕೆ ಹೊಸದಾಗಿ ಹರಿಹರ ತಾಲೂಕಿನ ಕೆ. ಬೇವಿನಹಳ್ಳಿ, ಬನ್ನಿಕೋಡು, ಸಾಲಕಟ್ಟೆ, ಬೆಳ್ಳೂಡಿ ಹಾಗೂ ಷಂಶೀಪುರ ಸೇರ್ಪಡೆಯಾಗಿದ್ದು, ಒಟ್ಟು  45 ಹಳ್ಳಿಗಳು ದೂಡಾ ವ್ಯಾಪ್ತಿಗೆ ಬರಲಿವೆ. ಜೊತೆಗೆ ಮೂರ್ನಾಲ್ಕು ತಿಂಗಳಿನಲ್ಲಿ ಜೆ. ಹೆಚ್. ಪಟೇಲ್ ಬಡಾವಣೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ.ದೂಡಾದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅಧ್ಯಕ್ಷ ಎ. ವೈ. ಪ್ರಕಾಶ್ ಅವರು, ಸ್ಥಳೀಯ ಯೋಜನಾ ಪ್ರದೇಶಕ್ಕೆ ಸರ್ಕಾರದ ಆದೇಶದ ಮೇರೆಗೆ ಮಹಾಯೋಜನೆ (ಪರಿಷ್ಕೃತ 2) ತಾತ್ಕಾಲಿಕ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು. ದಾವಣಗೆರೆ – ಹರಿಹರ ಪಟ್ಟಣದ ಜನಸಂಖ್ಯೆಯು 2011ರ ಜನಗಣತಿಯಂತೆ 5,47,943 ಮಂದಿ ಇದ್ದು, 2041ಕ್ಕೆ 9,25,000ರಷ್ಟು ಜನಸಂಖ್ಯೆಯಾಗಬಹುದೆಂದು ಅಂದಾಜಿಸಿ ಮಹಾಯೋಜನೆ ತಯಾರಿಸಲಾಗಿದೆ. ದಾವಣಗೆರೆ – ಹರಿಹರ ಸ್ಥಳೀಯ ಯೋಜನಾ ಪ್ರದೇಶದ ಒಟ್ಟು ಕ್ಷೇತ್ರ 28,304.39 ಹೆಕ್ಟೇರ್ ಪೈಕಿ 13,505.37 ಹೆಕ್ಟೇರ್ ಪ್ರದೇಶವನ್ನು ಪಟ್ಟಣದ ಅಭಿವೃದ್ಧಿಗಾಗಿ ನಗರೀಕರಣದ ಎಲ್ಲೆಯೆಂದು ಪ್ರಸ್ತಾಪಿಸಿ ಪ್ರತಿ ಹೆಕ್ಟೇರ್ ಗೆ 69 ಜನರಂತೆ ಜನಸಾಂದ್ರತೆ ಪರಿಗಣಿಸಿ ಮಹಾಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.ಸರ್ಕಾರದಿಂದ ಅನುಮೋದನೆಯಾದ ಮಹಾಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆ ಆಹ್ವಾನಿಸಲಾಗಿತ್ತು. ಬಂದ ಸಲಹೆ ಹಾಗೂ ಆಕ್ಷೇಪಣೆ ಕುರಿತಂತೆ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ಆ ಬಳಿಕ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಿರ್ದೇಶಕರ ಮೂಲಕ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ ಎಂದರು. ದಾವಣಗೆರೆ – ಹರಿಹರ ಪಟ್ಟಣದ ಜನಸಂಖ್ಯೆ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ, ಹಾಲಿ ಬೆಳವಣಿಗೆಗಳ ಗತಿ, ಹವಾಗುಣ, ರಸ್ತೆಗಳ ಹಾಲಿ ಪರಿಚಲನೆ ವ್ಯವಸ್ಥೆಯ ಸಮಸ್ಯೆಗಳನ್ನು ವಿಶ್ಲೇಷಿಸಿ ಯೋಜನಾ ತತ್ವಗಳಿಗೆ ಅನುಗುಣವಾಗಿ ಹಾಗೂ ಪಟ್ಟಣದ ಯೋಜಿತ ಬೆಳವಣಿಗೆಗೆ 13,505.37 ಹೆಕ್ಟೇರ್ ಪ್ರದೇಶದಲ್ಲಿ ವಸತಿಗಾಗಿ 7466.18 ಹೆಕ್ಚೇರ್, ವಾಣಿಜ್ಯಕ್ಕಾಗಿ 776.55 ಹೆಕ್ಟೇರ್, ಕೈಗಾರಿಕೆಗಾಗಿ 763.78 ಹೆಕ್ಟೇರ್, ಸಾರ್ವಜನಿಕ ಹಾಗೂ ಅರೆಸಾರ್ವಜನಿಕ ಉಪಯೋಗಕ್ಕಾಗಿ 685.75 ಹೆಕ್ಟೇರ್, ಪುರತತ್ವ ಪ್ರದೇಶಕ್ಕಾಗಿ 0.91 ಹೆಕ್ಟೇರ್, ಉದ್ಯಾನವನ, ಬಯಲು ಜಾಗಕ್ಕಾಗಿ 1045.86 ಹೆಕ್ಟೇರ್, ಸಾರ್ವಜನಿಕ ಉಪಯೋಗಕ್ಕಾಗಿ 71.10 ಹೆಕ್ಟೇರ್ ಹಾಗೂ ಸಾರಿಗೆ, ಸಂಪರ್ಕ ವಲಯಕ್ಕೆ 2696.24 ಹೆಕ್ಟೇರ್ ಗುರುತಿಸಲಾಗಿದೆ ಎಂದು ತಿಳಿಸಿದರು. ನಗರದ ಭವಿಷ್ಯದ ದೃಷ್ಟಿಯಿಂದ ಹೆಚ್ಚಾಗಬಹುದಾದ ಜನಸಂಖ್ಯೆಗೆ ಅನುಗುಣವಾಗಿ ಸುಗಮ ಸಾರಿಗೆ ಹಾಗೂ ಸಾರಿಗೆ ದಟ್ಟಣೆ ಕಡಿಮೆ ಮಾಡುವ ಸಂಬಂಧ 60 ಮೀಟರ್ ಅಗಲದ ವರ್ತುಲ ರಸ್ತೆ ಪ್ರಸ್ತಾಪಿಸಲಾಗಿದೆ, ರಾಷ್ಟ್ರೀಯ ಹೆದ್ದಾರಿ ನಿಯಮಾವಳಿಯಂತೆರಾಷ್ಟ್ರೀಯ ಹೆದ್ದಾರಿ -4 (ಬೈಪಾಸ್ ರಸ್ತೆ) ಗೆ ಕಟ್ಟಡ ರೇಖೆಗೆ 40 ಮೀಟರ್ ನಿಗದಿಪಡಿಸಲಾಗಿದೆ ಎಂದರು. ಖಾಸಗಿ ವಸತಿ ವಿನ್ಯಾಸ ಅನುಮೋದನೆ ನೀಡುವಾಗ ಶೇಕಡಾ 10 ಉದ್ಯಾನವನ, ಶೇ. 5 ನಾಗರಿಕ ಸೌಲಭ್ಯ ನಿವೇಶನಕ್ಕೆ ಕಾಯ್ದಿರಿಸಿ, ರಸ್ತೆ ಪರಿಚಲನೆ ಅಳವಡಿಸಿ ಗರಿಷ್ಠ ಶೇ. 55ರವರೆಗೆ ವಸತಿಗೆ ಪರಿಗಣಿಸಿ ಅನುಮೋದನೆ ನೀಡಬಹುದಾಗಿದೆ. ಮಹಾಯೋಜನೆ ರಸ್ತೆ ಹಾದು ಹೋಗಿದ್ದು, ರಸ್ತೆಯ ವಿಸ್ತೀರ್ಣ ಶೇ. 40ಕ್ಕಿಂತ ಹೆಚ್ಚಾದಲ್ಲಿ ಶೇ. 5 ನಾಗರಿಕ ಸೌಲಭ್ಯದ ನಿವೇಶನಕ್ಕೆ ಕಾಯ್ದಿರಿಸದೇ ಅನುಮೋದನೆ ನೀಡಬಹುದಾಗಿದೆ. ಈ ಆದೇಶದ ದಿನಾಂಕದಿಂದ ಎರಡು ವರ್ಷಗಳವರೆಗೆ ಪ್ರಾಧಿಕಾರವು ಯಾವುದೇ ಭೂ ಉಪಯೋಗ ಬದಲಾವಣೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬಾರದೆಂಬ ಷರತ್ತಿನೊಂದಿಗೆ ಅಂತಿಮ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.