ದುಷ್ಟ, ಭ್ರಷ್ಟ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲಲ್ಲ:ಅಶೋಕ

ಬೀದರ್:ಏ.7: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದುಷ್ಟ, ಭ್ರಷ್ಟ ಆಡಳಿತ ನೀಡುತ್ತಿದೆ. ಇದು ಲಂಚ ಹೊಡೆಯುವ ಮೀಟರ್ ಸರ್ಕಾರವಾಗಿದೆ. ಹತ್ತು ತಿಂಗಳ ಅವಧಿಯಲ್ಲೇ ಈ ಸರ್ಕಾರ ಜನರಿಂದ ಸಂಪೂರ್ಣ ತಿರಸ್ಕøತವಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯದಲ್ಲಿ ನಮ್ಮ ಶಕ್ತಿ ವೃದ್ಧಿಯಾಗಿದೆ. ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲಬಾರದು. ಇದಕ್ಕಾಗಿ ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರು ಚುನಾವಣೆ ಸವಾಲಾಗಿ ಸ್ವೀಕರಿಸಿ ಕೆಲಸ ಮಾಡೋಣ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ನಗರದ ಶಿವನಗರದಲ್ಲಿರುವ ಕೇಂದ್ರ ಸಚಿವ, ಬಿಜೆಪಿ ಲೋಕಸಭಾ ಅಭ್ಯರ್ಥಿ ಭಗವಂತ ಖೂಬಾ ಅವರ ನಿವಾಸದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್ ಮುಖಂಡರ ಸಮನ್ವಯ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಜನತೆ ಇಂಥ ಕೆಟ್ಟ, ಭ್ರಷ್ಟ ಸರ್ಕಾರ ಯಾವತ್ತೂ ನೋಡಿಲ್ಲ. ಕಳೆದ ಬಾರಿ ಗೆದ್ದಿದ್ದ ಬೆಂಗಳೂರು ಗ್ರಾಮಾಂತರದಲ್ಲೂ ಕಾಂಗ್ರೆಸ್ ಸೋಲಲಿದೆ. ಅಲ್ಲಿನ ನಮ್ಮ ಅಭ್ಯರ್ಥಿ ಡಾ.ಮಂಜುನಾಥ ಭರ್ಜರಿ ಜಯ ಗಳಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈತ್ರಿಯಿಂದ ಹೊಸ ಅಲೆ ಸೃಷ್ಟಿಯಾಗಿದೆ. ದೇಶಕ್ಕೆ ಮೋದಿ ಅವರೆÉೀ ಬೇಕು ಎಂಬುದು ಜನರ ನಿರ್ಧಾರವಾಗಿದೆ. ನಮ್ಮ ಮೈತ್ರಿಯು ಹಾಲು-ಜೇನು ತರಹವಿದೆ. ಇದು ಉತ್ತಮ ಸಮ್ಮಿಲನ. ಕಾಂಗ್ರೆಸ್‍ಗೆ ಸೋಲಿಸುವ ಹುರುಪು ಬಿಜೆಪಿ ಜೊತೆಗೆ ಜೆಡಿಎಸ್‍ನವರಲ್ಲೂ
ಸಾಕಷ್ಟಿದೆ. ಸಮಾಜ ಒಡೆಯುವ, ದೇಶ ಒಡೆಯುವ ಮನಸ್ಥಿತಿಯುಳ್ಳ ಕಾಂಗ್ರೆಸ್ ತಕ್ಕ ಪಾಠ ಕಲಿಸಲು ಈಗ ಕಾಲ ಬಂದಿದೆ. ಮೈತ್ರಿ ಮಾಡಿಕೊಂಡಿದ್ದರಿಂದ ಏನೂ ಆಗಲ್ಲ ಎಂದು ಕಾಂಗ್ರೆಸ್‍ನವರು ನಮಗೆ ಟಾಂಗ್ ನೀಡುತ್ತಿದ್ದಾರೆ. ಮೈತ್ರಿಯಿಂದ ಏನಾಗಲಿದೆ ಎಂದು ಹಿಯಾಳಿಸಿ, ಛೇಡಿಸಿ ಮಾತನಾಡುತ್ತಿದ್ದಾರೆ. ಅವರಿಗೆ ನಮ್ಮ ತಾಕತ್ತು ತೋರಿಸಬೇಕಿದೆ. ಡಿ.ಕೆ.ಸುರೇಶ್ ಸ್ಪರ್ಧಿಸುವ ಕ್ಷೇತ್ರದಲ್ಲಿ ಸಹ ಇಂದು ಕಾಂಗ್ರೆಸ್ ಪರವಾಗಿ ಬೆಟ್ ಕಟ್ಟಲು ಯಾರೂ ರೆಡಿಯಿಲ್ಲ. ಇದು ಕಾಂಗ್ರೆಸ್ ದುಸ್ಥಿತಿಗೆ ನಿದರ್ಶನ ಎಂದರು.
ರಾಜಣ್ಣ ಹೇಳಿಕೆಗೆ ಆಕ್ರೋಶ:
ಮೋದಿ ಪ್ರಧಾನಿ ಆಗೇ ಆಗ್ತಾರೆ. ಅವರಿಗೆ ಈಶ್ವರನ ಆಶೀರ್ವಾದ ಇದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಆದರೆ ಸಚಿವ ರಾಜಣ್ಣ ಅವರು ದೇವೇಗೌಡರಿಗೆ ಸಾಯುವ ವಯಸ್ಸು ಎಂದು ಹೇಳುತ್ತಾರೆ. ನಾಚಿಕೆ ಬರಬೇಕು. ಮಾನವೀಯತೆ ಇದೆಯಾ?
ಸೋಲಿನ ಭಯದಿಂದ ಕಾಂಗ್ರೆಸ್‍ನವರು ಏನೇನೋ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ ಅಶೋಕ್ ಅವರು, ಬಿಜೆಪಿ-ಜೆಡಿಎಸ್
ನಡುವೆ ಒಂದಿಷ್ಟು ಸಣ್ಣಪುಟ್ಟ ಗೊಂದಲಗಳೂ ಬರಬಾರದು. ಇಲ್ಲಿ ಖೂಬಾ ಅಲ್ಲ ಮೋದಿ, ಕಮಲ ಚುನಾವಣೆಗೆ ಸ್ಪರ್ಧಿಸಿದೆ ಎಂದು ತಿಳಿದು ಎಲ್ಲರೂ ಕೆಲಸ ಮಾಡಬೇಕು. ಖೂಬಾ ಕೇವಲ ಮೋದಿ ಅವರ ರಾಯಭಾರಿ. ಈ ವಿಚಾರಧಾರೆಯಲ್ಲಿ ಕೆಲಸ ಮಾಡಿದಾಗ ಭರ್ಜರಿ ಲೀಡ್‍ನಿಂದ ನಾವು ಗೆಲ್ಲುತ್ತೇವೆ ಎಂದು ಹೇಳಿದರು.
ಬೀದರ್ ಅಭಿವೃದ್ಧಿಗಾಗಿ ಖೂಬಾ ಬೇಕು:

ಜೆಡಿಎಸ್ ಹಿರಿಯ ಮುಖಂಡ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಮಾತನಾಡಿ, ನಮ್ಮ ಮೈತ್ರಿಯಿಂದ ರಾಜ್ಯದಲ್ಲಿ ಹೊಸ ಸಂಚಲನ ಮೂಡಿದೆ. ನಾವೆಲ್ಲರೂ ಪಣ ತೊಟ್ಟು ಕೆಲಸ ಮಾಡುತ್ತೇವೆ. ಒಂದು ತಿಂಗಳು ನಿದ್ರೆ ಮಾಡದೆ ಕೆಲಸ ಮಾಡುತ್ತೇವೆ. ಕ್ಷೇತ್ರವಾರು ಸಭೆ ನಡೆಸಿ ತಳಮಟ್ಟಕ್ಕೆ ಹೋಗುತ್ತೇವೆ. ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ನಮಗೆ ಮತ್ತಷ್ಟು ಬಲ ಬಂದಿದೆ. ಡಾ.ಶೈಲೇಂದ್ರ ಬೆಲ್ದಾಳೆ ಶಾಸಕರಿದ್ದಾರೆ. ಇವರು 50 ಸಾವಿರ ಮತ ಗಳಿಸಿ ಗೆದ್ದಿದ್ದಾರೆ. ನಾನು 32 ಸಾವಿರ ಮತ ಗಳಿಸಿ ಸೋತಿದ್ದೇನೆ. ನಮ್ಮ ಒಟ್ಟು ಮತಗಳ ಸಂಖ್ಯೆ 80 ಸಾವಿರ ದಾಟುತ್ತಿದೆ. ಎಲ್ಲರೂ ಸಂಘಟಿತರಾಗಿ ಪ್ರಯತ್ನಿಸಿದಾಗ ದಕ್ಷಿಣ ಕ್ಷೇತ್ರದಲ್ಲೇ ನಮಗೆ ಒಂದು ಲಕ್ಷ ಮತಗಳು ಬರುವುದು ಗ್ಯಾರಂಟಿ. ಅಭಿವೃದ್ಧಿಗಾಗಿ ಮತ್ತೆ ಭಗವಂತ ಖೂಬಾ ಅವರಿಗೆ ಗೆಲ್ಲ್ಲಿಸಲೇಬೇಕಿದೆ ಎಂದು ಹೇಳಿದರು.

ತೀಸ್ರಿ ಬಾರ್ ತೀನ್ ಲಾಖ್ ಪಾರ್:
ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿ, ಈ ಚುನಾವಣೆಯಲ್ಲಿ ಅಹಂಕಾರ ಸೋಲಿಸಿ ಸರಳತೆಯಿಂದಿರುವ ನನಗೆ ಗೆಲ್ಲಿಸಬೇಕಿದೆ. ಭ್ರಷ್ಟಾಚಾರಿ, ಅಪಾರದರ್ಶಕಕ್ಕೆ ಸೋಲಿಸಿ ಪಾರದರ್ಶಕನಾಗಿರುವ ನನಗೆ ಗೆಲ್ಲಿಸಬೇಕಿದೆ. ಜನಸ್ಪಂದನೆ ಮಾಡದವರಿಗೆ ಸೋಲಿಸಿ ಸದಾ ಜನರ ಮಧ್ಯೆ ಇರುವ ನನಗೆ ಗೆಲ್ಲಿಸಬೇಕಿದೆ. ನನ್ನ ಗೆಲುವು ಶತಸಿದ್ಧವಿದೆ. ಆದರೆ ಲೀಡ್ ಕನಿಷ್ಠ ಮೂರು ಲಕ್ಷ ಇರಬೇಕು. ಅಂದಾಗಲೇ ನಮ್ಮೆಲ್ಲರ ಪರಿಶ್ರಮಕ್ಕೆ ಫಲ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಮೈತ್ರಿಯು ಸಹಜವೇ ನಮ್ಮ ಶಕ್ತಿ ಹೆಚ್ಚಿಸಿದೆ. ಬಿಜೆಪಿ ಹಿರಿಯಣ್ಣನಂತೆ. ನಾವು ಗೆಲ್ಲಲು ಜೆಡಿಎಸ್ ಬೆನ್ನಿಗೆ ನಿಂತಿದೆ. ಜೆಡಿಎಸ್‍ನವರಿಗೆ ಗೌರವ, ಸಹಕಾರ ನೀಡುವುದು ನಮ್ಮವರ ಆದ್ಯ ಕರ್ತವ್ಯ. ಅವರ ಮತಗಳೆಲ್ಲವೂ ನಮಗೆ ಬರುವಂತೆ ನೋಡಿಕೊಳ್ಳಬೇಕಿದೆ. ಅವರಿಗೆ ಎಲ್ಲ ರೀತಿಯ ಸಹಕಾರ, ಸಹಾಯ ನೀಡಿ ಸಮನ್ವಯತೆ ಸಾಧಿಸಿ ಕೆಲಸ ಮಾಡೋಣ. ಎಲ್ಲ ಕಾರ್ಯಕ್ರಮಗಳನ್ನು ಬಗ್ಗೆ ಪರಸ್ಪರರು ಮಾಹಿತಿ ಹಂಚಿಕೊಂಡು ಜಂಟಿಯಾಗಿ ಪ್ರಚಾರ ನಡೆಸೋಣ. ಕಾಂಗ್ರೆಸ್‍ನವರು ಬಹಳ ಅಹಂಕಾರದಲ್ಲಿದ್ದಾರೆ. ಅವರ ಅಹಂಕಾರಕ್ಕೆ ಮುಕ್ತಿ ನೀಡುವ ಸಮಯ ಬಂದೊದಗಿದೆ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಎರಡೂ ಪಕ್ಷಗಳ ನಾಯಕರಲ್ಲಿ ಸಮನ್ವಯತೆ ಗಟ್ಟಿಯಾಗಿದೆ. ಉತ್ತಮ ಸಮಾಜ ನಿರ್ಮಾಣ, ರಾಜ್ಯ ಹಾಗೂ ದೇಶದ ಅಭಿವೃದ್ಧಿಯ ಚಿಂತನೆಯಡಿ ಪಕ್ಷದ ಹಿರಿಯರೆಲ್ಲರೂ ಸೇರಿ ಮೈತ್ರಿಗೆ ಸೈ ಎಂದಿದ್ದಾರೆ. ಇದರಿಂದ ನಮ್ಮ ಬಲ ಹೆಚ್ಚಾಗಿದೆ. ಕಾರ್ಯಕರ್ತರು ಸಹ ಸಮನ್ವಯತೆಯನ್ನು ಸಾಧಿಸಿ ಜಂಟಿ ಕಾರ್ಯಾಚರಣೆ ಮಾಡಿದರೆ ಈ ಸಲ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಮೂರು ಲಕ್ಷ ಲೀಡ್‍ನಿಂದ ಗೆಲ್ಲುವುದು ಖಚಿತ. ತೀಸ್ರಿ ಬಾರ್ ತೀನ್ ಲಾಖ್ ಪಾರ್ ಗುರಿಯನ್ನು ನಾವು ಸಾಕಾರ ಮಾಡೋಣ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ್, ಶರಣು ಸಲಗರ, ಮಾಜಿ ಶಾಸಕರಾದ ಅಮರನಾಥ ಪಾಟೀಲ್, ಎಂ.ಜಿ.ಮುಳೆ, ಪ್ರಕಾಶ ಖಂಡ್ರೆ, ಮಲ್ಲಿಕಾರ್ಜುನ ಖೂಬಾ, ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಪೀರಪ್ಪ ಯರನಳ್ಳೆ, ಕಿರಣ ಪಾಟೀಲ್, ಶಶಿ ಹೊಸಳ್ಳಿ, ಮಹೇಶ್ವರಿ ವಾಲಿ, ಶಾಂತಲಿಂಗ ಸಾವಳಗಿ, ಅಶೋಕ ಕೊಡಗೆ, ರಾಜಶೇಖರ ಜವಳೆ, ಇಸ್ಮಾಯಿಲ್‍ಚಾಚಾ ಬೆಳಕುಣಿ, ರಾಜು ಚಿಂತಾಮಣಿ, ಐಲಿನ್ ಜಾನ್ ಮಠಪತಿ, ರೌಫ್ ಕಚೇರಿವಾಲೆ, ಜಯಕುಮಾರ ಕಾಂಗೆ ಸೇರಿದಂತೆ ಎರಡೂ ಪಕ್ಷಗಳ ಪ್ರಮುಖರು ಇದ್ದರು.

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ
ಕಾಂಗ್ರೆಸ್ ನಾಯಕರಿಗೆ ನಡುಕ

ಜೆಡಿಎಸ್ ಹಿರಿಯ ಮುಖಂಡ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಮಾತನಾಡಿ, ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ ಪಾಳಯದಲ್ಲಿ ನಡುಕ ಶುರುವಾಗಿದೆ. ನಮ್ಮ ಮೈತ್ರಿ ಸಮಾಜಕ್ಕೆ ದೊಡ್ಡ ಸಂದೇಶ ಸಾರಿದೆ. ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಈ ಮೈತ್ರಿ ಆಗಿದ್ದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತಿರಲಿಲ್ಲ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಪಕ್ಷದ ಕಾರ್ಯಕರ್ತರು ಖುಷಿಯಲ್ಲಿದ್ದಾರೆ. ನಾನು ಹಿಂದೆ ಕಾಂಗ್ರೆಸ್ ಜೊತೆಗೆ ಮೈತ್ರಿ ಆಡಳಿತ ಸಹ ನೋಡಿದ್ದೇನೆ. ಬಿಜೆಪಿ ಜೊತೆಗೆ ಮೈತ್ರಿ ಆಡಳಿತವೂ ನೋಡಿದ್ದೇನೆ. ಆದರೆ ಬಿಜೆಪಿ ಜೊತೆಗಿನ ಮೈತ್ರಿ ನಮಗೆ ಬಹಳ ಗೌರವ ಕೊಟ್ಟಿದೆ. ಕಾಂಗ್ರೆಸ್‍ನವರು ಅವಕಾಶವಾದಿ ಆಡಳಿತ ಮಾಡಿದರೆ, ಬಿಜೆಪಿ ಅಭಿವೃದ್ಧಿಪರ ಆಡಳಿತ ನೀಡಿದೆ ಎಂದರು. ದೇಶ ಸಮೃದ್ಧ, ಸಶಕ್ತವಾಗಿ ಮಾಡಿ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಶೀಲವಾಗಿ ಮೆರೆಸುವುದೇ ನಮ್ಮ ಗುರಿಯಾಗಿದೆ. ಇದಕ್ಕೆ ನರೇಂದ್ರ ಮೋದಿ ಅವರೇ ಪ್ರಧಾನಿ ಆಗುವುದು ಅನಿವಾರ್ಯ. 92ನೇ ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮೈತ್ರಿ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ, ಜೋಶ್ ತುಂಬಿದ್ದಾರೆ. ಮೋದಿ ಅವರೇ ಸಮರ್ಥ ಪ್ರಧಾನಿ ಎಂದು ಘೋಷಿದ್ದಾರೆ. ಬೀದರ್ ಬಸವಣ್ಣನವರ ಕರ್ಮಭೂಮಿ. ಬಸವ ನಾಡಿನಿಂದ ನಾವು ಗೆಲ್ಲುವುದು ಬಹಳ ಮುಖ್ಯವಾಗಿದೆ. ಎಲ್ಲರೂ ನಿರಂತರ ಸಭೆ ನಡೆಸಿ, ಸತತ ಸಮನ್ವಯತೆ ಸಾಧಿಸಿ ಹೆಜ್ಜೆ ಇಟ್ಟು ಭಗವಂತ ಖೂಬಾ ಅವರನ್ನು ಭರ್ಜರಿಯಾಗಿ ಗೆಲ್ಲಿಸೋಣ. ಮೈತ್ರಿ ಆದ ಕಾರಣ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಂದು ಎಂದು ಭಾವಿಸಿ ಸಾಗೋಣ ಎಂದು ಕರೆ ನೀಡಿದರು.

ಎಲ್ಲೆಡೆ ಬರ ಆವರಿಸಿದೆ. ಕುಡಿಯುವ ನೀರಿನ ದಾಹ ಎದ್ದಿದೆ. ಜಾನುವಾರುಗಳಿಗೆ ಮೇವಿಲ್ಲ. ಕರೆಂಟ್ ಇಲ್ಲ. ಆದರೆ ಕಾಂಗ್ರೆಸ್‍ನವರು ಮಾತ್ರ ಚೆನ್ನಾಗಿ ಮೇಯುತ್ತಿದ್ದಾರೆ. ಕ್ಷಣ-ಕ್ಷಣಕ್ಕೂ ಲಂಚ ಹೊಡೆಯುತ್ತಿರುವ ಮೀಟರ್ ಸರ್ಕಾರ ಇದಾಗಿದೆ. ಸಿದ್ಧರಾಮಯ್ಯ ಅವರು ಪೆಟ್ರೋಲ್ ಇಲ್ಲದೆ ಬೆಂಕಿ ಹಚ್ಚುವ ಗುಣ ಹೊಂದಿದ್ದಾರೆ. ಕಾಂಗ್ರೆಸ್‍ಗೆ ಹೀನಾಯ ಸೋಲು ಕಟ್ಟಿಟ್ಟ ಬುತ್ತಿ. 400 ಸ್ಥಾನಗಳೊಂದಿಗೆ ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತ.
-ಆರ್.ಅಶೋಕ್
ವಿಧಾನಸಭೆ ವಿರೋಧ ಪಕ್ಷದ ನಾಯಕರು