
ವಿಜಯಪುರ, ಸೆ.07: ಭೂಮಿಯ ಮೇಲೆ ಆವರಿಸಿರುವ ಅಂಧಕಾರವನ್ನು ಹೋಗಲಾಡಿಸಲು ಮತ್ತು ‘ಧರ್ಮ’ದ ಆಳ್ವಿಕೆಗೆ ಧಕ್ಕೆ ತರುತ್ತಿರುವ ಎಲ್ಲಾ ದುಷ್ಟ ಶಕ್ತಿಗಳನ್ನು ತೊಡೆದು ಹಾಕುವಲ್ಲಿ ಶ್ರೀ ಕೃಷ್ಣ ಪರಮಾತ್ಮನ ಪಾತ್ರ ಅನನ್ಯವಾಗಿದೆ ಎಂದು ವಿಜಯಪುರ ಜಿಲ್ಲೆಯ ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಗುರುವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶ್ರೀ ಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಕೃಷ್ಣ ಜಯಂತಿಯನ್ನು ಪ್ರಪಂಚದಾದ್ಯಂತ ಬಹಳ ವಿನೋದ ಮತ್ತು ಸಂಭ್ರಮದಿಂದ ಆಚಸಲಾಗುತ್ತದೆ. ವಿಷ್ಣುವಿನ ಅತ್ಯಂತ ಪ್ರಮುಖ ಮಾನವ ಅವತಾರಗಳಲ್ಲಿ ಶ್ರೀ ಕೃಷ್ಣರು ಒಬ್ಬರಾಗಿದ್ದಾರೆ. ಅವರು ಮಹಾನ್ ಹಿಂದೂ ಮಹಾಕಾವ್ಯವಾದ ಮಹಾಭಾರತದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಎಂದರು.
ಆಧ್ಯಾತ್ಮಿಕ ಉಪನ್ಯಾಸಕರಾದ ಜಯತೀರ್ಥ ಪಂಢರಿ ಅವರು ಉಪನ್ಯಾಸ ನೀಡಿ, ಅವತಾರ ಪುರುಷನಾದ ಶ್ರೀ ಕೃಷ್ಣನ ಪರಮಾತ್ಮರ ಜನ್ಮದ ಹಿಂದಿನ ದಂತಕಥೆಯು ಸಾಕಷ್ಟು ಕುತೂಹಲಕಾರಿಯಾಗಿದೆ. ಏಕೆಂದರೆ ಭೂಮಿಯ ಮೇಲೆ ದುಷ್ಟ ಶಕ್ತಿಗಳು ಆಳ್ವಿಕೆ ನಡೆಸುತ್ತಿದ್ದಾಗ, ಭೂಮಿಯ ಮೇಲಿನ ದುಷ್ಟತನವನ್ನು ನಾಶಮಾಡಲು ಶ್ರೀಕೃಷ್ಣನ ಅವತಾರ ಅಗತ್ಯವಾಯಿತು. ಶ್ರಾವಣ ಮಾಸದ 8 ನೇ ದಿನ (ಅಷ್ಟಮಿ) ಭಗವಾನ್ ವಿಷ್ಣುವು ಮಧ್ಯರಾತ್ರಿಯ ಸಮಯದಲ್ಲಿ ಭೂಮಿಯ ಮೇಲೆ ಕೃಷ್ಣನಾಗಿ ಜನಿಸಿದ ಶ್ರೀ ಕೃಷ್ಣನು ಭಗವಾನ್ ವಿಷ್ಣುವಿನ ಅವತಾರವಾಗಿದ್ದು, ವಾಸ್ತವವಾಗಿ 8ನೆಯವನಾಗಿದ್ದನು. ಅವರು ಮಥುರಾದಲ್ಲಿ ದೇವಕಿ ಮತ್ತು ವಸುದೇವ ಎಂಬ ಯಾದವ ರಾಜಕುಮಾರರ ಮಗನಾಗಿ ಜನಿಸಿದ ಭೂಮಿ ಮೇಲೆ ಉದ್ದೇಶಪೂರ್ವಕವಾಗಿ ಹೇಗೆ ಬದುಕಬೇಕು ಎಂಬುದನ್ನು ತಿಳಿಸುವ ಭಗವದ್ಗೀತೆ, ‘ದೇವರ ಗೀತೆ’ಯನ್ನು ಜಗತ್ತಿಗೆ ಪಸರಿಸಿದ ಕೀರ್ತಿ ಅವತಾರ ಪುರುಷರಾದ ಶ್ರೀ ಕೃಷ್ಣ ಪರಮಾತ್ಮರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ. ನಾಗರಾಜ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಈರಪ್ಪ ಆಶಾಪುರ, ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಯಾದ ಅನುಸೂಯ ಚಲವಾದಿ, ಗುರು ಕನ್ನೂರ, ಆರ್. ಜಿ.ಮಂಗಲಗಿ, ಭೀಮಶಿ ಜಾಧವ, ಸೋಮನಗೌಡ ಕಲ್ಲೂರ, ಭೀಮರಾಯ ಜಿಗಜಿಣಗಿ, ದೇವೆಂದ್ರ ಮಿರೇಕರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು. ತಡವಲಗಾದ ದಾನಮ್ಮ ಹಾಗೂ ತಬಲಾ ಸಾಥ್ ನೊಂದಿಗೆ ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಸಂಗೀತಾ ಮಠಪತಿ ನಿರೂಪಿಸಿದರು.
ಮೆರವಣಿಗೆಗೆ ಚಾಲನೆ: ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಬೆಳಿಗ್ಗೆ 9.30 ಗಂಟೆಗೆ ಆರಂಭವಾದ ಶ್ರೀ ಕೃಷ್ಣ ಅವರ ಭಾವಚಿತ್ರದ ಮೆರವಣಿಗೆಗೆ ವಿಜಯಪುರ ಜಿಲ್ಲೆಯ ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ ಅವರು ಚಾಲನೆ ನೀಡಿದರು. ಮೆರವಣಿಗೆಯು ಕಲಾ ತಂಡದೊಂದಿಗೆ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಕನಕದಾಸ ವೃತ್ತದಿಂದ ಆಗಮಿಸಿ, ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಮಾಪ್ತಿಗೊಂಡಿತು.