ದುಷ್ಟರ ಸದೆ ಬಡಿಯಲು ರಾಜ್ಯದಲ್ಲೂ ಯೋಗಿ ಮಾದರಿ;ಸಿಎಂ

ಬೆಂಗಳೂರು,ಜು.೨೮- ರಾಜ್ಯದಲ್ಲಿ ಕೋಮುಸೌಹಾರ್ದವನ್ನು ಕದಡುವ ಶಕ್ತಿಗಳನ್ನು ಸದೆ ಬಡಿದೇ ತೀರುತ್ತೇವೆ. ಅಗತ್ಯ ಬಿದ್ದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಆದಿತ್ಯನಾಥ್ ಅವರ ಮಾದರಿಯನ್ನು ಅನುಷ್ಠಾನ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ತಮ್ಮ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳನ್ನು, ಗೊತ್ತುಗುರಿಗಳನ್ನು ವಿವರಿಸಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮು ಭಾವನೆ ಕದಡುವ ಶಕ್ತಿಗಳನ್ನು ಸದೆಬಡಿಯುತ್ತೇವೆ. ಕೇವಲ ಬಾಯಿ ಮಾತಿನಲ್ಲಿ ಮಾತ್ರವಲ್ಲ, ಕಠಿಣ ಕ್ರಮಗಳನ್ನು ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಕೋಮುಸೌಹಾರ್ದ ನಿಯಮಕ್ಕೆ ಹಲವಾರು ಕ್ರಮ ಆಗಿದೆ. ಅಗತ್ಯ ಪ್ರಸಂಗ ಬಂದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಡೆಲ್ ಇಲ್ಲಿಯೂ ಬರುತ್ತದೆ ಎಂದರು.ಕೆಲ ಸಂಘಟನೆಗಳು ಯಾವುದನ್ನೆಲ್ಲ ನಡೆಯಬಾರದೋ ಅಂತಹುದನ್ನೆಲ್ಲ ಸೃಷ್ಟಿಸುವ ಪ್ರಯತ್ನ ನಡೆಸಿದೆ. ಹಿಜಾಬ್ ೫ ಜನ ವಿದ್ಯಾರ್ಥಿಗಳಿಂದ ಶುರುವಾಗಿ ಇಡೀ ರಾಜ್ಯಕ್ಕೆ ಹಬ್ಬಿಸಲಾಯಿತು. ಆಜಾನ್ ಬಗ್ಗೆ ನ್ಯಾಯಾಲಯದ ಆದೇಶ ಏನಿತ್ತೋ ಅದನ್ನು ಪಾಲನೆ ಮಾಡಿದ್ದೇವೆ. ಯಾವ ಯಾವ ಸವಾಲುಗಳು ಬಂದಾಗ ಅದನ್ನು ಸಮರ್ಥವಾಗಿ ಎದುರಿಸಿದ್ದೇವೆ ಎಂದರು.
ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ನಿಷೇಧದ ಬಗ್ಗೆ ಕೇಂದ್ರ ಸರ್ಕಾರ ಸದ್ಯದಲ್ಲೇ ಒಂದು ನಿರ್ಧಾರ ಪ್ರಕಟಿಸುತ್ತದೆ. ಇವುಗಳನ್ನು ನಿಷೇಧಿಸುವುದಕ್ಕೆ ಕಾನೂನು ಸಲಹೆ ಬೇಕಿದೆ. ರಾಜ್ಯಸರ್ಕಾರ ಎಲ್ಲ ರೀತಿಯ ಕಾನೂನು ಸಲಹೆ ಪಡೆದು ವರದಿ ಕಳುಹಿಸಿದೆ ಎಂದರು.
ಮಂಗಳೂರಿನ ಪ್ರವೀಣ್ ಹತ್ಯೆ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುತ್ತೇವೆ. ಶಿವಮೊಗ್ಗ ಹರ್ಷನ ಕೊಲೆಯಲ್ಲಿ ದಸ್ತಗಿರಿಯಾದಂತೆ ಇಲ್ಲೂ ಬೇಗ ಬಂಧನವಾಗುತ್ತದೆ. ಕೋಮು ಸೌಹಾರ್ದ ಕದಡುವ ಶಕ್ತಿಗಳನ್ನು ಧಮನ ಮಾಡುತ್ತೇವೆ ಎಂದರು.
ಅಮಾಯಕರನ್ನು ಹತ್ಯೆ ಮಾಡಿ ಕೋಮು ಸೌಹಾರ್ದ ಕದಡಿ ಅಶಾಂತಿ ಸೃಷ್ಟಿಸುವ ಪ್ರಯತ್ನಗಳು ರಾಜ್ಯದಲ್ಲಿ ಮಾತ್ರವಲ್ಲ, ನೆರೆಯ ಕೇರಳ, ರಾಜಸ್ತಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜ್ಯದಲ್ಲೂ ಆಗಿದೆ. ನಾವಿದ್ದನ್ನು ಸದೆಬಡಿಯುವ ಸಂಕಲ್ಪ ಮಾಡಿದ್ದೇವೆ ಎಂದರು.
ಜನೋತ್ಸವವನ್ನು ರದ್ದು ಮಾಡಿದ ಬಗ್ಗೆ ಹಲವು ವ್ಯಾಖ್ಯಾನಗಳು ಕೇಳಿ ಬರುತ್ತಿವೆ.ಕಾರ್ಯಕರ್ತನ ಹತ್ಯೆಗೆ ಜನರು ವ್ಯಕ್ತ ಮಾಡಿದ ಆಕ್ರೋಶದ ಭಾವನೆಯ ಹಿನ್ನೆಲೆಯಲ್ಲಿ ಆತ್ಮಸಾಕ್ಷಿಯಿಂದ ಈ ತೀರ್ಮಾನ ಮಾಡಿದ್ದೇನೆ ಎಂದರು.
ಭಯೋತ್ಪಾದಕ ನಿಗ್ರಹ ಪಡೆ ನಿನ್ನೆ ತಡ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅಮಾಯಕರನ್ನು ಕೊಲ್ಲುವ ಸಂಘಟನೆಗಳನ್ನು ನಾಶ ಮಾಡಲು ವಿಶೇಷ ತರಬೇತಿ ಪಡೆದ ಭಯೋತ್ಪಾದಕ ನಿಗ್ರಹ ದಳವನ್ನು ಸ್ಥಾಪಿಸುವ ಚಿಂತನೆಯೂ ಇದೆ ಎಂದರು.