ದುಷ್ಟರ ಸಂಹಾರ ಶಿಷ್ಟರ ರಕ್ಷಣೆಗಾಗಿ ವೀರಭದ್ರಸ್ವಾಮಿ ಅವತಾರ

ಬಾಳೆಹೊನ್ನೂರು.ನ.೧೭; ಸತ್ಯ ಸಂಸ್ಕೃತಿ ಉಳಿವು ಬೆಳವಣಿಗೆಗಾಗಿ ದೇವರು ಬೇರೊಂದು ರೂಪದಲ್ಲಿ ಅವತರಿಸಿ ಉದ್ಧರಿಸುತ್ತಾನೆಂಬ ಮಾತಿದೆ. ದುಷ್ಟರ ಸಂಹಾರ ಶಿಷ್ಟರ ಸಂರಕ್ಷಣೆಗಾಗಿ ವೀರಭದ್ರಸ್ವಾಮಿ ಅವತಾರವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಹುಬ್ಬಳ್ಳಿಯ ಬಮ್ಮಾಪುರ ಬಣಕಾರ ಓಣಿಯಲ್ಲಿ ಶ್ರೀ ವೀರಭದ್ರೇಶ್ವರ-ಬಸವಣ್ಣ ನೂತನ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು. ಜೀವನ ಉನ್ನತಿ ಮತ್ತು ಶ್ರೇಯಸ್ಸಿಗೆ ಧರ್ಮಾಚರಣೆ ಮೂಲ. ದೇವರು ಮತ್ತು ಧರ್ಮದಲ್ಲಿ ಮನುಷ್ಯನ ನಂಬಿಗೆ ಅಚಲವಾಗಿರಬೇಕು. ಹಗಲು ಸೂರ್ಯ ರಾತ್ರಿ ಚಂದ್ರ ಬೆಳಕು ಕೊಟ್ಟರೆ ಸರ್ವ ಕಾಲದಲ್ಲಿ ಸರ್ವರಿಗೂ ಯಾವುದಾದರೂ ಬೆಳಕು ನೀಡುತ್ತಿದ್ದರೆ ಅದು ಧರ್ಮವೊಂದೇ ಎಂಬುದನ್ನು ಮರೆಯಬಾರದು. ಧರ್ಮ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಎಲ್ಲರೂ ಶ್ರಮಿಸುವ ಅವಶ್ಯಕತೆಯಿದೆ. ವೀರಶೈವ ಧರ್ಮದಲ್ಲಿ ಗೋತ್ರ ಸೂತ್ರಗಳಿವೆ. ವೀರಭದ್ರಸ್ವಾಮಿ ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಮತ್ತು ಗೋತ್ರ ಪುರುಷನಾಗಿ ಪೂಜೆಗೊಳ್ಳುತ್ತಿದ್ದಾನೆ. ಆತನ ಶಕ್ತಿ ಎಲ್ಲಡೆಯೂ ತುಂಬಿ ಹೊಮ್ಮಿದೆ. ಶ್ರೀ ವೀರಭದ್ರೇಶ್ವರ ದೇವಸ್ಥಾನ ಪಂಚ ಕಮೀಟಿಯವರು ಭಕ್ತರ ಸಹಕಾರದಿಂದ ಸುಂದರ ದೇವಸ್ಥಾನ ನಿರ್ಮಿಸಿ ಶ್ರೀ ವೀರಭದ್ರೇಶ್ವರ ಮತ್ತು ಶ್ರೀ ಬಸವಣ್ಣ ಮೂರ್ತಿ ಪ್ರತಿಸ್ಠಾಪಿಸಿರುವುದು ತಮಗೆ ಸಂತೋಷ ತಂದಿದೆ ಎಂದರು. ಕೇಂದ್ರ ಕಲ್ಲಿದ್ದಲು ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ, ಶಾಸಕ ಪ್ರಸಾದ್ ಅಬ್ಬಯ್ಯ, ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಧರ್ಮ ಪರಂಪರೆ ಮತ್ತು ಆದರ್ಶ ಮೌಲ್ಯಗಳ ಬಗೆಗೆ ಮಾತನಾಡಿದರು. ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಹುಬ್ಬಳ್ಳಿ ತಾಲೂಕಾ ಘಟಕದ ಅಧ್ಯಕ್ಷರಾದ ಪ್ರಕಾಶ ಬೆಂಡಿಗೇರಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಸ್ರಾರು ಜನರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದಕ್ಕೆ ಪಾತ್ರರಾದರು.