ದುಷ್ಟರ ಆಟ ಹೆಚ್ಚು ಕಾಲ ನಡೆಯಲ್ಲ:ಸಂಪತ್ತು ಹಂಚಿಕೆಗೆ ಗ್ಯಾರಂಟಿ ಯೋಜನೆ:ಸಿಎಂ

(ಸಂಜೆವಾಣಿ ಪ್ರತಿನಿಧಿಯಿಂದ)
ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಬೆಂಗಳೂರು,ಆ.೧೫:ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯವೆಂಬುದು ನಮ್ಮ ಜನರಿಗೆ ಅರ್ಥವಾಗಿರುವುದರಿಂದ ದುಷ್ಟರ ಆಟಗಳು ಬಹಳ ಕಾಲ ನಡೆಯುವುದಿಲ್ಲ ಎಂಬುದನ್ನು ಕರ್ನಾಟಕದ ಜನ ಸಾಬೀತು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪರೋಕ್ಷವಾಗಿ ಹಿಂದಿನ ಬಿಜೆಪಿ ಸರ್ಕಾರವನ್ನು ಟೀಕಿಸಿದರು.ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿ ಮಾತನಾಡಿದ ಅವರು, ನಮ್ಮ ಹಿರಿಯರ ತ್ಯಾಗ,ಬಲಿದಾನ, ಹೋರಟದಿಂದ ಸ್ವಾತಂತ್ರ್ಯವೇನೋ ಲಭಿಸಿತು. ಆದರೆ ನವ ಉದಾರವಾದ ನೀತಿಗಳು ಜಗತಿನಾದ್ಯಂತ ಪ್ರಾರಂಭವಾದ ಮೇಲೆ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತ ಹೋಯಿತು. ಇಂದು ನಮ್ಮಲ್ಲಿಯೇ ಶೇ. ೧೦ರಷ್ಟು ಜನರ ಶೇ.೭೮ಕ್ಕಿಂತ ಹೆಚ್ಚಿನ ಪ್ರಮಾಣದ ಸಂಪತ್ತಿನ ಮೇಲೆ ಯಜಮಾನಿಕೆ ಹೊಂದಿದ್ದಾರೆ. ಬ್ರಿಟಿಷ್ ಭಾರತದಲ್ಲಿ ನಮ್ಮ ದೇಶದ ಸಂಪತ್ತನ್ನು ಬ್ರಿಟಿಷರು ಹೊತ್ತೊಯ್ದರು, ಆದರೆ, ಇಂದು ನಮ್ಮಲ್ಲಿ ಕೆಲವೇ ದೊಡ್ಡ ಬಂಡವಾಳಗಾರರ ಬಳಿ ಸಂಪತ್ತು ಶೇಖರಣೆಗೊಳ್ಳುತ್ತಿದೆ. ಈ ರೀತಿಯಾದರೆ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿ ರಾಷ್ಟ್ರಕವಿ ಕುವೆಂಪುರವರ ಕವನದ ಸಾಲಾದ ‘ಕತ್ತಿ ಪರದೇಶಿಯಾದರೆ ಮಾತ್ರ ನೋವೇ? ನಮ್ಮವರೇ ಹದಹಾಕಿ ತಿವಿದರು ನೋವೆ ಎಂದು ಪ್ರಶ್ನಿಸಿದರು.ಸಂಪತ್ತು ಕೆಲವೇ ಕೆಲವು ಜನರ ಹತ್ತಿರ ಕ್ರೂಢೀಕರಣವಾಗುವುದನ್ನು ತಪ್ಪಿಸಲು ನಾವು ಸಂಪತ್ತಿನ ಸಂಗ್ರಹ ಮತ್ತು ಹಂಚಿಕೆ ಹಾಗೂ ಮರ ಹಂಚಿಕೆಗಳಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸುತ್ತಿದ್ದೇವೆ. ಅದಕ್ಕಾಗಿಯೇ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಕ್ಷ್ಮಿ, ಯೋಜನೆಗಳನ್ನು ಜಾರಿಗೆತಂದಿದ್ದೇವೆ. ಅರ್ಥಶಾಸ್ತ್ರಜ್ಞ, ಅಮರ್ಥ್ಯ ಸೇನ್ ಅವರ ಮಾತಿನಂತೆ ಅಭಿವೃದ್ಧಿಯೇ ಸ್ವಾತಂತ್ರ್ಯ ಎಂಬುದರಲ್ಲಿ ನಂಬಿಕೆ ಇಟ್ಟು ಈ ಯೋಜನೆಗಳನ್ನು ಅನುಷ್ಠಾನಮಾಡುತ್ತಿದ್ದೇವೆ ಎಂದರು.ರಾಜ್ಯದಲ್ಲಿ ಶಕ್ತಿ,ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳು ಜಾರಿಯಾಗಿವೆ. ಅ. ೨೭ ರಿಂದ ಗೃಹಲಕ್ಷ್ಮಿ ಯೋಜನೆಯನ್ನೂ ಜಾರಿ ಮಾಡುತ್ತಿದ್ದೇವೆ. ಗಾಂಧಿಜೀ ಅವರ ಚಿಂತನೆಯ ನೆರಳಲ್ಲೇ ನಾವು ಕಾರ್ಯನಿರ್ವಹಿಸುತ್ತಿದ್ದೇವೆ.ಯಾವುದೇ ಯೋಜನೆ ಜಾರಿಗೊಳಿಸುವ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಇದರಿಂದ ಅನುಕೂಲವಾಗುವುದೇ ಸಾಮಾಜಿಕ ನ್ಯಾಯ ಪಾಲನೆಯಾಗುತ್ತಿದ್ದೇಯೇ ಎಂದು ಯೋಚಿಸಿಯೇ ಮುಂದಡಿ ಇಡುವುದು ನಮ್ಮ ಆಡಳಿತದ ಅಂತಃಸತ್ವವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಬೆಲೆ ಏರಿಕೆ ನಿರುದ್ಯೋಗ ಜಾತಿ ಧರ್ಮಗಳ ಕಾರಣಕ್ಕಾಗಿ ತಾರತಮ್ಯ ಭ್ರಷ್ಟಾಚಾರ, ಮುಂತಾದ ಕಾರಣಕ್ಕಾಗಿ ನಾಡಿನ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ರಾಜ್ಯದ ಅನೇಕ ಜಿಲ್ಲೆಗಳ ಜನರ ತಲಾದಾಯ ಹಿಂದೆ ಆಡಳಿತ ನಡೆಸಿದ್ದ ನಮ್ಮ ಹಿಂದಿನ ಸರ್ಕಾರದ ಅವಧಿಗೆ ಹೋಲಿಸಿದರೆ ನಂತರದ ಅವಧಿಯಲ್ಲಿ ಬಡತನ ಇನ್ನಷ್ಟು ಹೆಚ್ಚುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿದ ನಮ್ಮ ಸರ್ಕಾರ ಜನರ ಆರ್ಥಿಕಸಾಮಾಜಿಕ ಚೈತನ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಸಾರ್ವತ್ರಿಕಮೂಲ ಆದಾಯ ಎಂಬ ಹೊಸ ಆರ್ಥಿಕ ನೀತಿಯನ್ನು ಅಳವಡಿಸಿಕೊಂಡು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ.ಮುಖ್ಯಮಂತ್ರಿಗಳು ತಮ್ಮ ಭಾಷಣದುದ್ದಕ್ಕೂ ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿ ಗ್ಯಾರಂಟಿ ಯೋಜನೆಗಳಿಗೆ ಖರ್ಚುಮಾಡುತ್ತಿರುವ ವೆಚ್ಚ ಗ್ಯಾರಂಟಿ ಯೋಜನೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ನೆರವು ಅದರಲ್ಲೂ ಮಹಿಳೆಯರ ಸಬಲೀಕರಣ ಗ್ಯಾರಂಟಿ ಯೋಜನೆಗಳು ಪೂರಕವಾಗಿರುವುದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.ಈ ಗ್ಯಾರಂಟಿ ಯೋಜನೆಗಳಿಂದ ಬಡ ಮಧ್ಯ ವರ್ಗದ ಕುಟುಂಬಗಳ ಬದುಕಿನಲ್ಲಿ ಸಾಕಷು ಬದಲಾವಣೆ ಬರಲಿ. ಜಾತಿ, ಮತ ವರ್ಗ, ವರ್ಣ ಬೇಧವಿಲ್ಲದೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ ಎಂದರು.ಗ್ಯಾರಂಟಿ ಯೋಜನೆಗಳ ಬಗ್ಗೆ ಕೆಲವರು ನಕಾರಾತ್ಮಕ ಭಾವನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದರೆ ಎಂದು ದೂರಿದ ಅವರು ಸರ್ಕಾರವು ರಾಜ್ಯದ ಭೌತಿಕ ಅಭಿವೃದ್ಧಿ, ಸಾಮಾಜಿಕ ಅಭಿವೃದ್ದಿ ಎಂಬ ಎರಡೂ ಮಾದರಿಯನ್ನು ಒಂದೇ ರೀತಿಎಂದು ಪರಿಭಾವಿಸುತ್ತಿದೆ. ನಾವು ಸೃಷ್ಟಿಸಲು ಹೊರಟಿರುವ ಆಭಿವೃದ್ಧಿಯಲ್ಲಿ ರಾಜ್ಯದ ಸರಾಸರಿ ೧೩೦ ಕೋಟಿ ಕುಟುಂಬಗಳಿಗೆ ಸೇರಿದ ಜನರು ಪಾಲ್ಗೊಳ್ಳುತ್ತಿದ್ದಾರೆ.ಈ ಕೋಟಿ ಕೋಟಿ ಜನರಿಗೆ ಮಧ್ಯವರ್ತಿಗಳ ಕಾಟವಿಲ್ಲದೆ ಸವಲತ್ತುಗಳು ನೇರವಾಗಿ ತಲುಪಲಿವೆ ಮತ್ತು ಸಮಗ್ರ ಮಹಿಳಾ ಸಶಕ್ತಿ ಕರಣ ರಾಜ್ಯವಾಗಲಿದೆ. ಇದರಿಂದ ಕರ್ನಾಟಕ ಮಾದಿ ಅಭಿವೃದ್ಧಿ ವ್ಯಾಖ್ಯಾನವೂ ಪ್ರಾರಂಭವಾಗಿದೆ ಎಂದರು.ನಮ್ಮ ಸರ್ಕಾರವು ಹಿಂದಿನ ಸರ್ಕಾರಗಳಿಗಿಂತಲೂ ಹೆಚ್ಚಿನ ಸಂಪನ್ಮೂಲಗಳನ್ನು ಮೂಲಭೂತ ಸೌಕರ್ಯಗಳಿಗೆ ವಿನಿಯೋಗಿಸಲು ಬದ್ಧವಾಗಿದೆ ಎಂದು ಹೇಳಿದ ಅವರು, ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಅವರ ಆಶಯದಂತೆ ಸಮಸಮಾಜ ನಿರ್ಮಾಣಕ್ಕೆ ಒತು ನೀಡಿದೆ ಎಂದರು.ಅವಕಾಶ ವಂಚಿತ ಸಮುದಾಯಗಳ ಹಿತರಕ್ಷಣೆ ಹಾಗೂ ಅವರ ಅಭ್ಯುದಯ ನಮ್ಮ ಕಾಳಜಿಯಾಗಿದೆ. ಹಿಂದುಳಿದವರು ಪರಿಶಿಷ್ಟ ಜಾತಿ ಪಂಗಡದವರು ಅಲ್ಪಸಂಖ್ಯಾತರು ಮಹಿಳೆಯರು ಕಾರ್ಮಿಕರು ರೈತರು ಮತ್ತು ಶೋಷಿತ ವರ್ಗದವದ ಶ್ರೇಯೋಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ ಎಂದರು. ಶಿಕ್ಷಣ ಮ್ತು ಆರೋಗ್ಯ ಕ್ಷೇತ್ರಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಿದೆ. ಸೂರಿಲ್ಲದವರಿಗೆ ಸೂರು ಒದಗಿಸಲು ಯೋಜನೆ ರೂಪಿಸಿದ್ದೇವೆ.ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಬೆಂಗಳೂರು ನಗರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಸೇರಿಸಲು ಸರ್ಕಾರ ಮುಂದಾಗಿದೆ ಹಾಗೆಯೇ ದೇವನಹಳ್ಳಿನೆಲಮಂಗಲ, ಹೊಸಕೋಟೆ ದೊಡ್ಡಬಳ್ಳಾಪುರ ಮಾಗಡಿಗಳಲ್ಲಿ ಉಪನಗರ ಟೌನ್‌ಶಿಪ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ನಾಡಿನ ನೆಲಜಲ ಭಾರತ ಹಾಗೂ ಅಸ್ಮಿತೆಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ. ಹಾಗೆಯೇ ಮಹಾನ್ ಮಾನವತಾವಾದಿಗಳಾದ ಬುದ್ಧ, ಗಾಂಧೀಜಿ ಬಸವಣ್ಣ, ಅಂಬೇಡ್ಕರ್ ಕುವೆಂಪು ಮೊದಲಾದವರು ಪ್ರತಿಪಾದಿಸಿದ ಮಾನವೀಯತೆಯ ತಳಹದಿಯ ಅಭಿವೃದ್ಧಿ ಮಾದರಿಯನ್ನು ನಾವು ಅಳವಡಿಸಿಕೊಂಡಿದ್ದೇವೆ ಇದನ್ನು ಕರ್ನಾಟದ ಮಾದರಿ ಅಭಿವೃದ್ಧಿ ಎಂದು ಕರೆಯಲಾಗುತ್ತದೆ. ಮನುಷ್ಯ ಜಾತಿ, ತಾನೊಂದೆ ವಲಂ ಎಂಬ ಕಂಪನ ಮಾತುಗಳು ಸಮಸ್ತ ಜನಕೋಟಿಯ ಘೋಷ ವಾಕ್ಯವಾಗಲಿ ಎಂದು ಮುಖ್ಯಮಂತ್ರಿಗಳು ಹೇಳಿದರು.