ದುಷ್ಟತೆಯ ನಾಶದ ಮೇರು ಸಂದೇಶದ ಹೋಳಿ

ಕಲಬುರಗಿ:ಮಾ.06: ಸಂಸ್ಕøತ ಶಬ್ದವಾದ ‘ಹೋಳಿ’ ಎಂದರೆ ‘ಸುಡು’ ಎಂದರ್ಥವಾಗಿದೆ. ಅಂದರೆ ಮನುಷ್ಯನಲ್ಲಿ ಅಡಗಿರುವ ಕಾಮ, ಕ್ರೋದ, ಮತ್ಸರ ಅಂತಹ ಅರಿಷಡ್ವರ್ಗಗಳು, ಕೆಟ್ಟ ಗುಣಗಳನ್ನು ನಾಶಪಡಿಸಿ, ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಪರಸ್ಪರ ಶಾಂತಿ, ಸೌಹಾರ್ದತೆಯ ಜೀವನ ಸಾಗಿಸಬೇಕೆಂಬ ಮೇರು ಸಂದೇಶವನ್ನು ಹೋಳಿ ಹಬ್ಬ ಹೊಂದಿದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ದೇವಿ ನಗರದಲ್ಲಿರುವ ಬಿರಾದಾರ ಕಾಂಪೆಕ್ಸ್‍ನಲ್ಲಿರುವ ‘ವಿದ್ಯಾಸಿರಿ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಏರ್ಪಡಿಸಿದ್ದ ‘ಹೋಳಿ ಹಬ್ಬದ ಸಂದೇಶ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹೋಳಿ ಹಬ್ಬದಲ್ಲಿ ಬಳಸುವ ಬಣ್ಣಗಳಲ್ಲಿ ರಾಸಾಯನಿಕಗಳನ್ನು ಬೆರೆಸಲಾಗುತ್ತಿದೆ. ಇದು ಚರ್ಮ, ಕಣ್ಣು, ಕಿವಿ, ದೇಹಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ. ಒತ್ತಾಯಪೂರ್ವಕವಾಗಿ ಮತ್ತೊಬ್ಬರಿಗೆ ಬಣ್ಣ ಎರಚುವುದು, ಹಬ್ಬದ ಹೆಸರಿನಲ್ಲಿ ಚಂದಾ ವಸೂಲಿ ಮಾಡಲು ರಸ್ತೆ ಮೇಲೆ ತೊಂದರೆ ನೀಡುವುದು, ಕೆಟ್ಟ ಶಬ್ದಗಳನ್ನು ಬಳಸುವದು, ಬೈಯ್ದಾಟ, ಹೊಡೆದಾಟ, ಪುಂಡಾಟಿಕೆ ಪ್ರದರ್ಶನ, ಕಂಠಪೂರ್ತಿ ಕುಡಿದು ಅತ್ಯಂತ ವೇಗವಾಗಿ ಬೈಕ್, ವಾಹನಗಳನ್ನು ಚಲಿಸಿ ಅಪಘಾತಕ್ಕೀಡಾಗುವುದು, ಜಗಳವಾಡುವಂತಹ ಕೃತ್ಯಗಳು ನಿಲ್ಲಬೇಕಾಗಿದೆ ಎಂದು ನುಡಿದರು.
ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ ಮಾತನಾಡಿ, ದುಷ್ಟ ಶಕ್ತಿಗಳನ್ನು ನಾಶಪಡಿಸಿ, ಶಿಷ್ಟತೆಯನ್ನು ಕಾಪಾಡಿಕೊಂಡು ಹೋಗುವ, ಪರಸ್ಪರ ಪ್ರೀತಿ, ಶಾಂತಿ, ಸೌಹಾರ್ಧತೆ, ಸಹಬಾಳ್ವೆಯಿಂದ ಜೀವನ ಸಾಗಿಸಬೇಕೆಂಬ ಸಂದೇಶವನ್ನು ನೀಡುವ ಈ ಹಬ್ಬದ ಎಲ್ಲಾ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಶಾಂತಿಯಿಂದ ಹೋಳಿ ಹಬ್ಬವನ್ನು ಆಚರಿಸುವ ಮೂಲಕ ಹಬ್ಬದ ಪಾವಿತ್ರ್ಯತೆಯನ್ನು ಉಳಿಸುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಸತೀಶ್ ಹತ್ತಿ, ರೇವಣಸಿದ್ದಪ್ಪ ಪವಾಡಶೆಟ್ಟಿ, ಪ್ರಕಾಶ ಸರಸಂಬಿ, ಮಹಾಂತಪ್ಪ ಕುಂಬಾರ ಹಾಗೂ ವಿದ್ಯಾರ್ಥಿಗಳಿದ್ದರು.