ದುಷ್ಚಟಗಳಿಂದ ದೂರವಾಗಿ; ಸರ್ಕಾರ ಸೌಲಭ್ಯಕ್ಕೆ ಮುಂದೆ ಬನ್ನಿ

(ಸಂಜೆವಾಣಿ ವಾರ್ತೆ)
ಯಾದಗಿರಿ, ಜು.11: ಮೀನುಗಾರರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ವಿದ್ಯಾವಂತರಾಗಿಸಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಹೇಳಿದರು.
ನಗರದ ಹೈಟಿಕ್ ಮೀನು ಮಾರಾಟ ಮಳಿಗೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಿದೆ.
ಮೀನುಗಾರಿಕೆ ಇಲಾಖೆಯಿಂದ ಮೀನುಗಾರರಿಗೆ ಸರ್ಕಾರ ಸಾಕಷ್ಟು ಸೌಲತ್ತು ಕೊಡುತ್ತಿದೆ. ಇವುಗಳನ್ನು ಪಡೆದುಕೊಂಡು ಸದ್ಬಳಕೆ ಮಾಡಿಕೊಂಡು ಬೆಳೆಯಬೇಕೆಂದು ತಿಳಿಸಿದರು.
ಇದರ ಜೊತೆಗೆ ಮೀನು ಅತಿ ಶ್ರೇಷ್ಠ ಆಹಾರ ಇದನ್ನು ಎಲ್ಲರಿಗೂ ತಿನ್ನಿಸುವ ನೀವು ಮೀನುಗಾರರ ಯುವಪೀಳಿಗೆ ಮಾತ್ರ ಮದ್ಯಪಾನ, ಬೀಡಿ, ಸಿಗರೇಟು, ಗುಟಕಾ, ತಂಬಾಕು ನಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ನೋವು ತಂದಿದೆ. ತಾವೆಲ್ಲರೂ ಕಡ್ಡಾಯವಾಗಿ ಇವುಗಳನ್ನು ಬಿಟ್ಟು ಶ್ರೇಷ್ಠ ಆಹಾರ ಸೇವಿಸುವ ಮೂಲಕ ಆರೋಗ್ಯವಂತಾಗಿರಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ರಾಜಣ್ಣ ಮಾತನಾಡಿ ಸರ್ಕಾರದಿಂದ ಬರತಕ್ಕಂತ ಸೌಲಭ್ಯ ಪಡೆಯುವುದರ ಜೊತೆಗೆ ನಮ್ಮ ಇಲಾಖೆಯಲ್ಲಿ ಮೀನುಗಾರರಿಗೆ ಗುಂಪು ವಿಮೆ ಸೌಲಭ್ಯ ಇದ್ದು ಇದನ್ನು ಪ್ರತಿಯೊಬ್ಬರು ಕಡ್ಡಯವಾಗಿ ಪಡೆಯಬೇಕೆಂದು ಸಲಹೆ ನೀಡಿದರು. ಜೀವ ವಿಮೆಗೆ ನಾವೆಲ್ಲರೂ ಹಣ ಕೊಟ್ಟು ಮಾಡಿಕೊಳ್ಳಬೇಕು ಆದರೆ ಮೀನು ಕೃಷಿಕರಿಗೆ ಸರ್ಕಾರವೇ ಉಚಿತವಾಗಿ ಮಾಡಿಕೊಡುತ್ತಿದೆ.
ಇಂತಹ ಸೌಲತ್ತನ್ನು ನೀವು ಪ್ರತಿಯೊಬ್ಬರು ಪಡೆದು ಸದ್ಬಳಕೆ ಮಾಡಿಕೊಳ್ಳಬೇಕೆಂದ ಅವರು ಏಕೆಂದರೆ ಪ್ರವಾಹ, ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಪರಿಸ್ಥಿತಿ ಇರುತ್ತದೆ. ಯಾವುದೇ ಸಂದರ್ಭದಲ್ಲಿ ಅಪಘಾತ ಸಂಭವಿಸಿದರೆ ಸರ್ಕಾರದಿಂದ ನಿಮ್ಮ ಕುಟುಂಬಕ್ಕೆ ನೇರವಾಗಿ ನೆರವು ಸಿಗುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮೀನುಗಾರರ ಶಹಾಪೂರ ಸಹಾಯಕ ನಿರ್ದೇಶಕ ಉಮೇಶ ಎಂ. ಬೋವಿ, ಯಾದಗಿರಿ ಸಹಾಯಕ ನಿದೇರ್ಶಕ ವೆಂಕಟೇಶ, ಸಂತೋಷ ಎಸ್.ಕೆ., ಸುರಪುರ ಮೀನುಗಾರರ ಸಂಘ ಅಧ್ಯಕ್ಷ ಶಿವರಾಮ್, ತಾಯಪ್ಪ, ಸಾಬಣ್ಣ, ದುರ್ಗಪ್ಪ, ಮಲ್ಲಿಕಾರ್ಜುನ, ರಾಜಪ್ಪ, ಸಿದ್ದಪ್ಪ ಸೇರಿ ಅನೇಕ ಮೀನುಗಾರರು ಇದ್ದರು.
ಪ್ರಾಸ್ತಾವಿಕವಾಗಿ ಶರಣಪ್ಪ ಹದನೂರು ಮಾತನಾಡಿದರು. ಮೀನುಗಾರರ ಸಂಘದ ಅಧ್ಯಕ್ಷ ನಿಂಗಪ್ಪ ಜಾಲಗಾರ ಸ್ವಾಗತಿಸಿದರು. ಹಳ್ಳೆಪ್ಪ ಯರಗೋಳ ನಿರೂಪಿಸಿದರು. ಕೊನೆಗೆ ದುರ್ಗಪ್ಪ ಶೇಗುರಕರ್ ವಂದಿಸಿದರು.