ದುಷ್ಕರ್ಮಿಗಳ ದಾಳಿ ಆಭರಣ ಅಂಗಡಿ ಮಾಲೀಕರು ಗಂಭೀರ ಗಾಯ

ಹಾಡಹಗಲೆ ಗುಂಡಿನ ಮೊರೆತ
ಬೆಂಗಳೂರು,ಮಾ.೧೪- ಹಾಡಹಗಲೇ ದರೋಡೆಗೆಂದು ಜುವೆಲ್ಲರಿಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಹಣ ಕೊಡಲು ಒಪ್ಪದ ಮಾಲೀಕನ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ದುರ್ಘಟನೆ ಕೊಡಿಗೆಹಳ್ಳಿಯ ದೇವಿನಗರದಲ್ಲಿ ನಡೆದಿದ್ದು ನಗರದ ಜನತೆ ಬೆಚ್ಚಿ ಬಿದ್ದಿದೆ.
ದುಷ್ಕರ್ಮಿಗಳು ಹಾರಿಸಿದ ಗುಂಡಿಗೆ ಜುವೆಲ್ಲರಿ ಅಂಗಡಿ ಮಾಲೀಕ ಅಂದಾರಾಮ್ ಹಾಗು ಆಪುರಾಮ್ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದ ಅವರನ್ನು ಕೊಡಲೇ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ಪಡೆಯುತ್ತಿರುವ ಅವರಲ್ಲಿ ಒಬ್ಬರು ಸ್ಥಿತಿ ಗಂಭೀರವಾಗಿದೆ.
ದೇವಿನಗರದಲ್ಲಿರುವ ಲಕ್ಷ್ಮೀ ಜುವೆಲ್ಲರ್ಸ್ ಬಳಿ ಇಂದು ಬೆಳಿಗ್ಗೆ ೧೧ರ ವೇಳೆ ಬೈಕ್ ಗಳಲ್ಲಿ ಬಂದ ನಾಲ್ವರಲ್ಲಿ ಇಬ್ಬರು ಬೈಕ್ ನಿಲ್ಲಿಸಿ ನೇರವಾಗಿ ಅಂಗಡಿಗೆ ನುಗ್ಗಿದ್ದಾರೆ.
ಚಿನ್ನದ ಅಂಗಡಿ ಮಾಲೀಕರ ಬಳಿ ತಮಗೆ ಹಣ ನೀಡುವಂತೆ ಕೇಳಿದ್ದಾರೆ. ಪಿಸ್ತೂಲು ತೋರಿಸಿಯೇ ಹಣ ಕೇಳಿದ್ದಾರೆ. ಆದರೆ, ಮಾಲೀಕರು ಹಣ ಕೊಡಲು ಒಪ್ಪದೆ ಇದ್ದಾಗ ಹಲ್ಲೆ ನಡೆಸಿದ್ದಲ್ಲದೆ ಗುಂಡು ಹಾರಿಸಿದ್ದಾರೆ.
ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಆ ಪರಿಸರದಲ್ಲಿದ್ದ ಜನರು ಓಡಿಬಂದಿದ್ದಾರೆ. ಆಗ ಈ ದರೋಡೆಕೋರರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಗುಂಡಿನ ದಾಳಿ ನಡೆಸಿ ಪರಾರಿಯಾಗುವ ಭರದಲ್ಲಿ ಪಿಸ್ತೂಲನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕೊಡಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜುವೆಲ್ಲರಿಯ ಸಿಸಿ ಟಿವಿ ಫೂಟೇಜ್ ಮತ್ತು ಅಕ್ಕಪಕ್ಕದ ಅಂಗಡಿಗಳ ಸಿಸಿ ಟಿವಿ ಫೂಜೇಜ್‌ನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ದಯಾನಂದ, ಹೆಚ್ಚುವರಿ ರಮಣ್ ಗುಪ್ತ ,ಡಿಸಿಪಿ ಲಕ್ಷ್ಮೀ ಪ್ರಸಾದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಕೊಡಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.