ದುಶ್ಚಟಮುಕ್ತ ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖ

ಕಲಬುರಗಿ,ಡಿ.4: ವಿದೇಶಿ ಸಂಸ್ಕøತಿಗೆ ಮಾರುಹೋಗಿ, ಮೋಜು-ಮಸ್ತಿ, ವಿವಿಧ ಮೂಲಗಳ ಪ್ರೇರಣ, ನಿರಾಶೆ, ದುಃಖ, ಪ್ರತಿಷ್ಠೆ, ಸಹವಾಸ ದೋಷ, ಒತ್ತಡ ನಿವಾರಣೆ, ಕ್ಷಣಿಕ ತೃಪ್ತಿ, ಪಾರ್ಟಿ ಸಮಾರಂಭ ಸೇರಿದಂತೆ ಮುಂತಾದ ಕಾರಣಗಳಿಂದ ನಮ್ಮ ಯುವಕರು, ವಿದ್ಯಾರ್ಥಿಗಳು ಮದ್ಯಪಾನ, ಧೂಮಪಾನ, ತಂಬಾಕು, ಗುಟಕಾ ಸೇವನೆ ಅಂತಹ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿಯೂ ಕೂಡಾ ದುಶ್ಚಟಗಳಿಗೆ ಒಳಗಾಗದೆ, ಬೇರೆಯವರಿಗೆ ಮನವರಿಕೆ ಮಾಡುವ ಮೂಲಕ ದುಶ್ಚಟಮುಕ್ತ ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ, ಯುವಕರ ಪಾತ್ರ ಪ್ರಮುಖವಾಗಿದೆ ಎಂದು ಚಿಂತಕ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಸಂಸ್ಥೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ಯೋಜನಾಧಿಕಾರಿ ಕಲ್ಲಣಗೌಡ್ರು ಅಭಿಮತ ವ್ಯಕ್ತಪಡಿಸಿದರು.
ಜೇವರ್ಗಿ ಪಟ್ಟಣದ ಬಸವೇಶ್ವÀರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ಶನಿವಾರ ಸಂಸ್ಥೆಯ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ‘ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ’ದಲ್ಲಿ ದುಶ್ಚಟ ನಿಷೇಧ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಕ್ಷೇತ್ರ ಯೋಜನಾಧಿಕಾರಿ ಕೇಶವ ಮಾತನಾಡಿ, ರುಚಿ ನೋಡಿ ಅಭ್ಯಾಸಕ್ಕಾಗಿ, ಅಭ್ಯಾಸದಿಂದ ಚಟವಾಗಿ, ಚಟದಿಂದ ಚಟ್ಟದವರೆಗೆ ಬೆನ್ನು ಬಿಡದ ವಸ್ತುಗಳೇ ಮಾದಕ ವಸ್ತುಗಳಾಗಿವೆ. ವಿದ್ಯಾರ್ಥಿ ದೆಸೆಯಿಂದಲೇ ಇಂತಹ ಚಟಗಳಿಗೆ ಅಂಟಿಕೊಂಡರೆ ಮುಂದೆ ನಿಮ್ಮ ಜೀವನ ಸಂಪೂರ್ಣವಾಗಿ ಹಾಳಾಗುತ್ತದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಮತ್ತು ಯುವಕರು ವಿದ್ಯೆಯ ಜೊತೆ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ. ಇಂತಹ ದುಶ್ಚಟಗಳಿಂದ ದೂರವಿದ್ದು, ನಿರಂತರ ಅಧ್ಯಯನದೊಂದಿಗೆ ಉನ್ನತವಾದ ಸಾಧನೆಯನ್ನು ಮಾಡುವ ಮೂಲಕ ದೇಶದ ಅಮೂಲ್ಯವಾದ ಆಸ್ತಿಯಾಗಬೇಕೆಂದು ಅನೇಕ ದೃಷ್ಠಾಂತಗಳ ಮೂಲಕ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಯೋಜನಾ ಕೃಷಿ ಅಧಿಕಾರಿ ಕಾಳಪ್ಪ, ಪ್ರಭಾರಿ ಪ್ರಾಂಶುಪಾಲೆ ಶರಣಮ್ಮ ಭಾವಿಕಟ್ಟಿ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಉಪನ್ಯಾಸಕರಾದ ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಮಂಜುನಾಥ ಎ.ಎಂ, ಪ್ರ.ದ.ಸ ನೇಸರ ಬೀಳಗಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.