ದುಶ್ಚಟಗಳ ಬೇಡ


(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು.16: ಶಾಲೆಗಳು ಪವಿತ್ರ ದೇವಸ್ಥಾನಗಳು ಇದ್ದಂತೆ. ಶಾಲಾ ಆವರಣದೊಳಗೆ ಮದ್ಯ ಮತ್ತು ಸಿಗರೇಟ್ ಸೇವನೆಯಂಥ ದುಶ್ಚಟಗಳನ್ನು ಮಾಡಬಾರದು' ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು. ತಾಲ್ಲೂಕಿನ ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಪ್ರೌಢ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಕ್ಷೇತ್ರದಾದ್ಯಂತ ಸರ್ಕಾರಿ ಶಾಲೆಗಳು ಮೂಲ ಸೌಲಭ್ಯಗಳಿಂದ ನರಳುತ್ತಿವೆ. ಬಹಳಷ್ಟು ಶಾಲೆಗಳಲ್ಲಿ ಸುಸಜ್ಜಿತ ಶೌಚಾಲಯಗಳು ಇಲ್ಲ. ಕೆಲ ಶಾಲೆಗಳಲ್ಲಿ ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಹೀಗಾಗಿ ಸರ್ಕಾರದಿಂದ ಬರುವ ಅನುದಾನವನ್ನು ಶಾಲೆಗಳ ಸುಧಾರಣೆಗೆ ಬಳಸಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದ ಅವರು ವಿದ್ಯೆಯಿಂದ ಮಾತ್ರ ಮಕ್ಕಳ ಪ್ರಗತಿ ಸಾಧ್ಯ ಎಂಬುದನ್ನು ಪಾಲಕರು ಮರೆಯಬಾರದು. ಕಾರಣ ಯಾವುದೇ ಕಾರಣಕ್ಕೂ ಮಕ್ಕಳನ್ನು ವಿದ್ಯೆಯಿಂದ ವಂಚಿತರನ್ನಾಗಿ ಮಾಡಬಾರದು' ಎಂದರು. ಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಸೋಮಣ್ಣ ಡಾಣಗಲ್ಲ ಮಾತನಾಡಿಶಿಗ್ಲಿ ಹಿಂದಿನಿಂದಲೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ ಊರು. ಕಾರಣ ಶಾಸಕರು ಶಿಗ್ಲಿಯಲ್ಲಿ ಸರ್ಕಾರಿ ಪದವಿ ಕಾಲೇಜನ್ನು ಸ್ಥಾಪಿಸಬೇಕು. ಅಲ್ಲದೆ ಸುತ್ತಲಿನ ಹತ್ತಾರು ಗ್ರಾಮಗಳಿಂದ ಶಿಗ್ಲಿಗೆ ಬರುವ ನೂರಾರು ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ವಸತಿ ನಿಲಯಗಳನ್ನು ಸ್ಥಾಪಿಸಬೇಕು. ಮತ್ತು ಎಸ್.ಎಸ್. ಕೂಡ್ಲಮಠ ಶಾಲಾ ಕಂಪೌಂಡ್ ಕಟ್ಟಲು ಅನುದಾನ ನೀಡಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ಡಿ.ವೈ. ಹುನಗುಂದ, ಬಸಣ್ಣ ಕಳಸದ, ಎಫ್.ಕೆ. ಕಾಳಪ್ಪನವರ ಮಾತನಾಡಿದರು.
ಶಿಕ್ಷಣ ಸಮಿತಿ ಅಧ್ಯಕ್ಷ ಎನ್.ಸಿ. ಹುನಗುಂದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಎಚ್.ಎಫ್. ತಳವಾರ, ಫಕ್ಕೀರೇಶಪ್ಪ ಹುನಗುಂದ, ಸಿ.ಎಂ. ರಾಗಿ, ವೀರಣ್ಣ ಪವಾಡದ, ಶಂಭು ಹುನಗುಂದ, ಮುದಕಣ್ಣ ಗಾಡದ, ಸಿದ್ರಾಮಪ್ಪ ಪವಾಡದ, ಎಸ್.ಎನ್. ಕಳ್ಳಿಹಾಳ, ಈರಣ್ಣ ಅಕ್ಕೂರ, ಮುಖ್ಯ ಶಿಕ್ಷಕರಾದ ಸಿ.ಬಿ. ಮೊಗಲಿ, ಎಲ್.ಪಿ. ಲಮಾಣಿ ಇದ್ದರು. ಬಿ.ಬಿ. ಬಳಿಗಾರ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಶಾಸಕರು ಶಾಲಾ ಸಂಸತ್ತನ್ನು ಉದ್ಘಾಟಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯರು ಶಾಲಾ ಕಂಪೌಂಡ್ ನಿರ್ಮಿಸಲು ಅನುದಾನ ನೀಡಬೇಕು ಎಂದು ಶಾಸಕರಿಗೆ ಮನವಿ ಸಲ್ಲಿಸಿದರು.
**