ದುಶ್ಚಟಗಳಿಗೆ ಒಳಗಾದವರನ್ನು ಧರ್ಮಸ್ಥಳ ಸಂಸ್ಥೆ ರಕ್ಷಿಸುವ ಕೆಲಸ ಮಾಡುತ್ತಿದೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.08: ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ದುಶ್ಚಟಗಳಿಗೆ ಒಳಗಾದ ಜನರನ್ನು ಮತ್ತು ಅವರ ಕುಟುಂಬಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ಹೆಚ್.ಟಿ.ಮಂಜು ಶ್ಲಾಘಿಸಿದರು.
ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ, ಚನ್ನರಾಯಪಟ್ಟಣ ಹಾಗೂ ಕೆ.ಆರ್.ಪೇಟೆ ಗಾಂಧಿ ಜಯಂತಿ ಆಚರಣಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ಆಯೋಜಿಸಿದ್ದ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನ ಜಾಗೃತಿ ಜಾಥಾ ಮತ್ತು ವ್ಯಸನ ಮುಕ್ತ ಸಾಧಕರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಸನ ಮುಕ್ತ ಸಮಾಜ ನಿರ್ಮಾಣ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕನಸು. ಇದನ್ನು ನನಸು ಮಾಡುವ ದಿಕ್ಕಿನಲ್ಲಿ ಧರ್ಮಸ್ಥಳ ಸಂಸ್ಥೆ ಕೆಲಸ ಮಾಡುವ ಮೂಲಕ ಗಾಂಧಿ ಜಯಂತಿಯನ್ನು ಅರ್ಥಪೂರ್ಣಗೊಳಿಸುತ್ತಿದೆ ಎಂದ ಶಾಸಕರು ದುಶ್ಚಟಗಳು ಕೇವಲ ಒಬ್ಬ ವ್ಯಕ್ತಿಯ ಆರೋಗ್ಯ ಮತ್ತು ಆರ್ಥಿಕತೆಯನ್ನು ಹಾಳು ಮಾಡುವುದಿಲ್ಲ. ಬದಲಾಗಿ ಒಂದು ಕುಟುಂಬ ಮತ್ತು ದೇಶದ ಸಾಮಾಜಿಕ ಆರೋಗ್ಯವನ್ನೂ ನಾಶಪಡಿಸುತ್ತದೆ. ಕುಡಿತದ ಚಟ ಕುಟುಂಬಗಳ ಮಾನಸಿಕ ಸ್ವಾಸ್ಥವನ್ನು ಹಾಳುಮಾಡುತ್ತದೆ. ಕುಡಿತದ ಚಟಕ್ಕೆ ಒಳಗಾದವರನ್ನು ಶಿಬಿರಗಳಿಗೆ ಕರೆತಂದು ಅವರನ್ನು ಚಟ ಮುಕ್ತರನ್ನಾಗಿಸುವ ಮಹತ್ವದ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುವ ಮೂಲಕ ಒಂದು ಸರ್ಕಾರ ಮಾಡಲಾಗದೇ ಇರುವುದನ್ನು ಮಾಡಿ ತೋರಿಸುತ್ತಿದೆ ಎಂದರು.
ಒಬ್ಬಯ ವ್ಯಕ್ತಿ ಬದಲಾದರೆ ಆತನ ಕುಟುಂಬ ಬದಲಾಗುತ್ತದೆ. ಒಂದು ಕುಟುಂಬ ಬದಲಾದರೆ ಅದರ ಪರಿಣಾಮ ಇತರ ಕುಟುಂಬಗಳ ಮೇಲೂ ಆಗಿ ಅವು ಬದಲಾವಣೆಯತ್ತ ಸಾಗುತ್ತವೆ. ಗಾಂಧೀಜಿಯವರು ಬಯಸಿದ ಅಹಿಂಸೆ ಮತ್ತು ಶಾಂತಿಯುತ ಸಮಾಜ ನಿರ್ಮಾಣ ಇಂದಿನ ಅತ್ಯಗತ್ಯವಾಗಿದೆ ಎಂದ ಶಾಸಕ ಹೆಚ್.ಟಿ.ಮಂಜು ಸ್ತ್ರೀಶಕ್ತಿ ಸಂಘಗಳ ರಚನೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪರಿಕಲ್ಪನೆ. ಮಹಿಳೆಯರ ಆರ್ಥಿಕ ಸಭಲೀಕರಣಕ್ಕೆ ಮಾಜಿ ಮುಖ್ಯಮಂತ್ರಿಗಳು ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳ ಮೂಲಕ ಮುನ್ನಡಿ ಬರೆದರೂ ಅದನ್ನು ಯಶಸ್ವಿಯಾಗಿ ಸಂಘಟಿಸಿ ಜಾರಿಗೊಳಿಸಿದ ಕೀರ್ತಿ ಧರ್ಮಸ್ಥಳ ಸಂಸ್ಥೆಗೆ ಸಲ್ಲುತ್ತದೆ.
ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲದ ಸುಳಿಗೆ ಸಿಲುಕಿ ನಲುಗುತ್ತಿದ್ದ ಗ್ರಾಮೀಣ ಸಮಾಜಕ್ಕೆ ಧರ್ಮಸ್ಥಳ ಸಂಸ್ಥೆ ಬಿಡುಗಡೆಯ ದಾರಿ ತೋರಿಸಿದೆ. ಹಣಕಾಸು ನೆರವಿನ ಜೊತೆಗೆ ಸ್ವ ಸಹಾಯ ಸಂಘಗಳ ಮೂಲಕ ಸಮುದಾಯದ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಿದೆ. ದೇವಾಲಯಗಳ ಜೀರ್ಣೋದ್ದಾರ, ಶಾಲಾ ಕಾಲೇಜುಗಳಿಗೆ ಪೀಠೋಪಕರಣಗಳ ಪೂರೈಕೆ, ಶಾಲಾ ಕಟ್ಟಡಗಳ ದುರಸ್ಥಿಗೆ ನೆರವು, ಕೆರೆಗಳ ಜೀಣ್ರ್ಣೊದ್ದಾರ ಮುಂತಾದ ಸಮುದಾಯ ಕಾರ್ಯಕ್ರಮಗಳ ಮೂಲಕ ಧರ್ಮಸ್ಥಳ ಸಂಸ್ಥೆ ನಾಡಿನ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ದಿಗೆ ಶ್ರಮಿಸುತ್ತಿದೆ ಎಂದರು.
ಮಹಾತ್ಮ ಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಧರ್ಮಸ್ಥಳ ಸಂಸ್ಥೆ ನೂರಾರು ಯೋಜನೆಗಳನ್ನು ರೂಪಿಸಿ ಗ್ರಾಮೀಣ ಅಭಿವೃದ್ದಿಗೆ ದುಡಿಯುತ್ತಿದೆ. ಮಹಿಳಾ ಸಭಲೀಕರಣ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದು ಇತರರಿಗೆ ಮಾದರಿಯಾಗಿದೆ ಎಂದರು.
ಧರ್ಮಸ್ಥಳ ಸಂಸ್ಥೆಯ ಯೋಜನಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ ಮದ್ಯಪಾನ ಮುಕ್ತ ಗ್ರಾಮಗಳ ನಿರ್ಮಾಣ ನಮ್ಮ ಮುಖ್ಯ ಗುರಿ. ಇದಕ್ಕಾಗಿ ರಾಜ್ಯದಾದ್ಯಂತ ಪ್ರತಿ ತಾಲೂಕಿನಲ್ಲಿಯೂ ಎರಡು ಗ್ರಾಮಗಳನ್ನು ಆರಂಭಿಕವಾಗಿ ಗುರುತಿಸಿ ಮದ್ಯಪಾನ ಮುಕ್ತ ಗ್ರಾಮಗಳನ್ನಾಗಿ ಮಾಡುತ್ತೇವೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಹೊಸ ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡದಂತೆ ನಮ್ಮ ಸಂಸ್ಥೆ ಹಕ್ಕೊತ್ತಾಯ ಮಾಡುತ್ತಿದೆ ಎಂದರು.
ಪಾಂಡವಪುರದ ಕನ್ನಡ ಪ್ರಾಧ್ಯಾಪಕಿ ಸರಸ್ವತಿ ಆಶಯ ಭಾಷಣ ಮಾಡಿದರು. ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಜಯರಾಮ ಕೋಟಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಸಮಾಜ ಸೇವಕ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ, ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಕಲ್ಯಾಣ ಮಂಟಪದ ಮಾಲೀಕ ಕೆ.ಎಸ್.ಬಸವೇಗೌಡ, ಧರ್ಮಸ್ಥಳ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಗಾಂಧಿ ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷ ಅಂ.ಚಿ.ಸಣ್ಣಸ್ವಾಮೀಗೌಡ,ಮುಖಂಡರಾದ ಶೀಳನೆರೆ ಅಂಬರೀಶ್, ಅಕ್ಕಿಹೆಬ್ಬಾಳು ಎ.ಆರ್.ರಘು ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.