ದುಶ್ಚಟಗಳಿಂದ ಮನುಷ್ಯನ ದೈಹಿಕ, ಬೌದ್ಧಿಕ ಕ್ಷಮತೆ ಕ್ಷೀಣ

ತಿ.ನರಸೀಪುರ: ಜೂ.01:- ತಂಬಾಕು, ಮದ್ಯಪಾನ ಮತ್ತು ಇನ್ನಿತರ ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನ ಬೌದ್ಧಿಕ ಮತ್ತು ದೈಹಿಕ ಕ್ಷಮತೆ ಕ್ಷೀಣವಾಗಲಿದ್ದು, ಇದು ಮನುಷ್ಯನ ವ್ಯಕ್ತಿತ್ವದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ವಿಚಾರವಾದಿ ಕರೋಹಟ್ಟಿ ಪ್ರಭುಸ್ವಾಮಿ ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.ದುಶ್ಚಟಗಳು ವ್ಯಕ್ತಿಯ ಖಾಸಗಿ ಬದುಕನ್ನು ಹಾಳು ಮಾಡುವುದಲ್ಲದೆ ವ್ಯಕ್ತಿಯ ಸಾಮಾಜಿಕ ಗೌರವಕ್ಕೆ ಧಕ್ಕೆ ತರಲಿವೆ.ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಧೂಮಪಾನ,ಮದ್ಯಪಾನ ಮತ್ತು ಮಾದಕ ವಸ್ತುಗಳ ದಾಸರಾಗುತ್ತಿದ್ದು,ವ್ಯಸನಿಗಳು ಮೊದಲಿಗೆ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ನಂತರ ಬೌದ್ಧಿಕ ಮತ್ತು ದೈಹಿಕ ಸ್ಥಿರತೆ ಕಳೆದುಕೊಳ್ಳುವರು ಎಂದರು.
ತಂಬಾಕು ಸೇವನೆ ಅತ್ಯಂತ ಅಪಾಯಕಾರಿ.ಇದರಿಂದ ಮನುಷ್ಯನ ದೇಹದಲ್ಲಿ ನಾನಾ ರೀತಿಯ ಅರ್ಬುಧ ಖಾಯಿಲೆಗಳು ಉಂಟಾಗಲಿವೆ.ಅಲ್ಲದೆ ತಂಬಾಕು ಸೇವನೆ ಮನುಷ್ಯನ ದೇಹದ ನರಮಂಡಲದ ಸಾಮಥ್ರ್ಯವನ್ನು ದುರ್ಬಲಗೊಳಿಸುವುದು.ಹಾಗಾಗಿ ಯುವ ಸಮೂಹ ಧೂಮಪಾನ ಮತ್ತು ಮದ್ಯಪಾನದಿಂದ ದೂರ ಇರಬೇಕು.ಮದ್ಯಪಾನ, ಧೂಮಪಾನ ಮತ್ತು ಮಾದಕ ವಸ್ತುಗಳ ವ್ಯಸನಿಗಳು ಹೆಚ್ಚು ಮಾನಸಿಕ ಖಿನ್ನತೆಗೆ ಒಳಗಾಗಲಿದ್ದು,ವ್ಯಸನಿಗಳಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ರೈತ ಸಂಘದ ಮುಖಂಡ ಮತ್ತು ಜೆಡಿಎಸ್ ರಾಜ್ಯ ವಕ್ತಾರ ತಾಯೂರು ಪ್ರಕಾಶ್ ಮಾತನಾಡಿ, ದುಶ್ಚಟಗಳು ಮನುಷ್ಯನನ್ನು ಜೀವಂತವಾಗಿ ಕೊಲ್ಲುವ ಆಯುಧಗಳು. ದುಶ್ಚಟಗಳಿಗೆ ದಾಸರಾದವರು ದಿನನಿತ್ಯ ಸಾವು ಬದುಕಿನ ನಡುವೆ ಹೋರಾಡುತ್ತಲೇ ಬದುಕಬೇಕಾಗುತ್ತದೆ. ಯುವಮಿತ್ರರು ಆದಷ್ಟು ದುಶ್ಚಟಗಳಿಂದ ದೂರ ಇರಬೇಕು ಎಂದು ಸಲಹೆ ನೀಡಿದರು.
ಪ್ರತಿ ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಭೆ ಅಡಕವಾಗಿರುತ್ತದೆ. ಅದನ್ನು ಜಗಜ್ಜಾಹಿರಗೊಳಿಸಲು ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ, ಸತತ ಪರಿಶ್ರಮ ,ಸಾಧಿಸುವ ಛಲ ಮತ್ತು ಕಾರ್ಯಸಿದ್ಧಿಗೆ ಶಿಸ್ತನ್ನು ರೂಢಿಸಿಕೊಳ್ಳಬೇಕು. ಇಂದಿನ ಕಾಲಘಟ್ಟದ ವಿದ್ಯಾರ್ಥಿಗಳು ಯುದ್ಧ ಕಾಲದಲ್ಲಿ ಶಸ್ತ್ರಭ್ಯಾಸ ಮಾಡುತ್ತಿರುವುದು ಶೋಚನಿಯ.ಹಾಗಾಗಿ ವಿದ್ಯಾರ್ಥಿಗಳು ಬಹುಮುಖ ಪ್ರತಿಭೆಗಳಾಗದೆ ಕೆಲವೇ ವಿಷಯಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದರು.
ಕಾರ್ಯಕ್ರಮದಲ್ಲಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ವಿ.ಉದಯ್ ಕುಮಾರ್ ಪ್ರಾಧ್ಯಾಪಕರಾದ ಡಾ ಎಂ.ಕೆ.ಮಾಧವಿ ,ಡಾ.ದೇವರಾಜೇಗೌಡ, ಡಾ.ಎಚ್.ಎಂ.ಮಂಜುನಾಥ್ , ಪೆÇ್ರ.ಪರಶಿವಮೂರ್ತಿ, ಉಪನ್ಯಾಸಕಿ ಪುಷ್ಪಲತಾ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ರೈತ ಮುಖಂಡ ಪ್ರಸಾದ ನಾಯಕ ,ರಾಜಶೇಖರಮೂರ್ತಿ,ಧರ್ಮಸ್ಥಳ ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ,ಮೇಲ್ವಿಚಾರಕ ಕುಮಾರ್ ಇತರರು ಹಾಜರಿದ್ದರು.