ದುಶ್ಚಟಗಳಿಂದ ದೂರವಿರಿ: ಇರಕಲ್ಲ

ಧಾರವಾಡ,ಜು31: ದುಶ್ಚಟಗಳಿಗೆ ದಾಸರಾಗಿ ಭವಿಷ್ಯದಲ್ಲಿ ಸಂಕಷ್ಟಕ್ಕೆ ಸಿಲುಕುವ ಬದಲು ಚಟಗಳಿಂದ ದೂರ ಇರುವುದು ಒಳ್ಳೆಯದು ಎಂದು ಖ್ಯಾತ ಎಲುಬು-ಕೀಲು ತಜ್ಞ ಡಾ.ಸತೀಶ ಇರಕಲ್ಲ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಮತ್ತು ಸಿ.ವಿ.ರಾಮನ್ ಕಾಲೇಜಿನ ಸಹಯೋಗದಲ್ಲಿ ಸಿ.ವಿ.ರಾಮನ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ `ದುಶ್ಚಟಗಳಿಂದ ದೂರವಿರಿ’ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ದುಶ್ಚಟಗಳು ಬಹು ಬೇಗ ಆಕರ್ಷಿಸುತ್ತವೆ. ಕಾಲೇಜು ಹಂತದಲ್ಲಿ ಯುವ ಸಮುದಾಯವನ್ನು ಜಾಹೀರಾತು, ಸಾಮಾಜಿಕ ಜಾಲತಾಣ ಇನ್ನಿತರ ಮಾಧ್ಯಮಗಳು ಕಡಿಮೆ ಅವಧಿಯಲ್ಲಿ ಆವರಿಸಿಬಿಡುತ್ತವೆ. ಅಲ್ಪ ಕಾಲದ ಮೋಜಿಗಾಗಿ ಆರಂಭವಾದ ಚಟಗಳು ನಂತರದ ದಿನಗಳಲ್ಲಿ ನಿತ್ಯದ ಅಭ್ಯಾಸಗಳಾಗಿ ಬಿಡುತ್ತವೆ. ಈ ಬಗ್ಗೆ ಜಾಗೃತಿ ವಹಿಸಿ ಆರೋಗ್ಯದ ಕಡೆಗೆ ಗಮನ ಹರಿಸಿದರೆ ಮುಂದೆ ಎದುರಾಗುವ ಅಪಾಯದಿಂದ ಪಾರಾಗಬಹುದು ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪುಂಡಲೀಕ ಹಡಪದ ಉದ್ಘಾಟಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಅನುರಾಧಾ ಆರಾಧ್ಯಮಠ ವಹಿಸಿದ್ದರು.ಯೋಜನಾ ನಿರ್ದೇಶಕ ಮಯೂರ ಪ್ರಾಸ್ತಾವಿಕವಾಗಿ ಮಾತನಾಡಿದರು.ಕು.ಅಭಿನಂದನ ಪ್ರಾರ್ಥಿಸಿದರು. ಉಪನ್ಯಾಸಕ ಮಾರುತಿ ಕದಂ ಸ್ವಾಗತಿಸಿದರು. ಮೇಲ್ವಿಚಾರಕ ಸಂಗಪ್ಪ ನಿರೂಪಿಸಿ, ವಂದಿಸಿದರು.
ಕಾಲೇಜಿನ ಬೋಧಕ-ಬೋಧಕೇತರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.