ದುರ್ಬಲರಿಗೆ ಶೇ. ೧೦ ಮೀಸಲಾತಿ ಸರ್ವೋಚ್ಛ ನ್ಯಾಯಾಲಯ ಅಸ್ತು

ನವದೆಹಲಿ,ನ೭:ಮುಂದುವರೆದ ಜಾತಿಗಳಲ್ಲಿರುವ ಆರ್ಥಿಕ ದುರ್ಬಲ ವರ್ಗದ ಜನರಿಗೆ ಶಾಲಾ ದಾಖಲಾತಿ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ. ೧೦ ರಷ್ಟು ಮೀಸಲಾತಿ ನೀಡುವ ಸಂಬಂಧ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಂದಿದ್ದ ೧೦೩ನೇ ತಿದ್ದುಪಡಿಯನ್ನು ಸರ್ವೋಚ್ಛ ನ್ಯಾಯಾಲಯ ಎತ್ತಿಹಿಡಿದು ಮಹತ್ವದ ತೀರ್ಪು ನೀಡಿದೆ.ಸೆ. ೨೭ ರಂದು ಮೀಸಲಾತಿ ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಪಂಚ ನ್ಯಾಯಾಧೀಶರ ಪೀಠ ತೀರ್ಪುನ್ನು ಕಾಯ್ದಿರಿಸಿತ್ತು. ಮುಂದುವರೆದ ಜಾತಿಗಳಲ್ಲಿರುವ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮೀಸಲಾತಿ ನೀಡುವುದು. ಸಂವಿಧಾನದ ಮೂಲ ರಚನೆ ಉಲ್ಲಂಘನೆಯಾಗಿದೆ ಎಂಬ ಕಾನೂನಾತ್ಮಕ ಪ್ರಶ್ನೆಯ ಬಗ್ಗೆ ಸುಪ್ರೀಂಕೋರ್ಟ್ ತೆರೆಎಳೆದಿದೆ.ಆರ್ಥಿಕವಾಗಿ ಹಿಂದುಳಿದ ಮಂದಿಗೆ ಶೇ ೧೦ ರಷ್ಟು ಮೀಸಲಾತಿ ನೀಡುವುದರಿಂದ ಸಂವಿಧಾನದ ಮೂಲ ರಚನೆ ಉಲ್ಲಂಘಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ ಈ ಮೂಲಕ ಸಾಮಾನ್ಯ ವರ್ಗದ ಆರ್ಥಿಕ ಹಿಂದುಳಿದವರಿಗೆ ಶೇ ೧೦ ರಷ್ಟು ಮೀಸಲಾತಿ ನೀಡಲು ಎದುರಾಗಿದ್ದ ಅಡೆ ತಡೆ ನಿವಾರಣೆಯಾಗಿದೆ.ಐವರು ನ್ಯಾಯಮೂರ್ತಿಗಳಲ್ಲಿ ನಾಲ್ಕು ಮಂದಿ ಸಂವಿಧಾನದ ೧೦೩ನೇ ತಿದ್ದುಪಡಿ ಎತ್ತಿ ಹಿಡಿದಿದ್ದರೆ ಓರ್ವ ನ್ಯಾಯಮೂರ್ತಿಗಳು ವಿರೋಧ ವ್ಯಕ್ತಪಡಿಸಿದ್ದರು. ೪-೧ ಬಹುಮತದ ತೀರ್ಪಿನ ಆಧಾರ ಮೇಲೆ ಸಿಂಧುತ್ವಕ್ಕೆ ಮಾನ್ಯತೆ ಸಿಕ್ಕಿದೆ.ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಮತ್ತು ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಮತ್ತು ಜೆಬಿ ಪರ್ದಿವಾಲಾ ಅವರ ಐದು ನ್ಯಾಯಾಧೀಶರ ಸಂವಿಧಾನ ಪೀಠ, ಆರ್ಥಿಕವಾಗಿ ಹಿಂದುಳಿದ ಮಂದಿಗೆ ಮೀಸಲಾತಿ ಸಿಂಧುತ್ವ ಎತ್ತಿಹಿಡಿಯುವ ಮೂಲಕ ಮಹತ್ವದ ತೀರ್ಪು ಪ್ರಕಟಸಿದೆ.ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಪ್ರವೇಶ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ ೧೦ರಷ್ಟು ಮೀಸಲಾತಿ ನೀಡುವ ೧೦೩ನೇ ಸಂವಿಧಾನದ ತಿದ್ದುಪಡಿಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ವಿಲೇವಾರಿ ಮಾಡಿ ತೀರ್ಪು ಪ್ರಕಟಿಸಿದೆ.”ಆರ್ಥಿಕ ಮಾನದಂಡಗಳ ಮೇಲಿನ ಮೀಸಲಾತಿಯು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ ಜೊತೆಗೆ ಮೀಸಲಾತಿಯು ಸಮಾನತೆಯ ಸಂಹಿತೆಯನ್ನು ಉಲ್ಲಂಘಿಸುವುದಿಲ್ಲ” ಎಂದು ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹೇಳಿದ್ದಾರೆ.ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರು ನ್ಯಾಯಮೂರ್ತಿ ಮಹೇಶ್ವರಿ ಅವರ ಮಾತಿಗೆ ಸಮ್ಮತಿಸಿದರು ಮತ್ತು ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದ ಮಂದಿಗೆ ಕೋಟಾ ಮಾನ್ಯ ಮತ್ತು ಸಾಂವಿಧಾನಿಕ ಎಂದು ಹೇಳಿದ್ದಾರೆ.ನ್ಯಾಯಮೂರ್ತಿ ಜೆಬಿ ಪರ್ದಿವಾಲಾ , ಸಂವಿಧಾನದ ೧೦೩ ನೇ ತಿದ್ದುಪಡಿ ಕಾಯಿದೆ ೨೦೧೯ ರ ಸಿಂಧುತ್ವವನ್ನು ಎತ್ತಿಹಿಡಿದಿದ್ದಾರೆ. ಅವರು “ಮೀಸಲಾತಿ ಪಟ್ಟಭದ್ರ ಹಿತಾಸಕ್ತಿಯಾಗಲು ಬಿಡಲಾಗುವುದಿಲ್ಲ. ಇದು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಕೊನೆಗೊಳಿಸಲು ಸಹಕಾರಿಯಾಗಲಿದೆ. ೭ ದಶಕಗಳ ಹಿಂದೆ ಪ್ರಾರಂಭವಾಗಿದ್ದು ಮತ್ತು ದೀರ್ಘಕಾಲದ ಅಭಿವೃದ್ಧಿ ಮತ್ತು ಶಿಕ್ಷಣ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದಿದ್ದಾರೆ.
ಭಟ್ ಅಸಮ್ಮತಿ:
ನ್ಯಾಯಮೂರ್ತಿ ರವೀಂದ್ರ ಭಟ್ ಅವರು ಆರ್ಥಿಕವಾಗಿ ಹಿಂದುಳಿದ ಮಂದಿಗೆ ಮೀಸಲಾತಿ ನೀಡಲು ಅಸಮ್ಮತಿ ವ್ಯಕ್ತಪಡಿಸಿ, “ಈ ತಿದ್ದುಪಡಿಯು ಸಾಮಾಜಿಕ ಮತ್ತು ಹಿಂದುಳಿದ ವರ್ಗವಕ್ಕೆ ಸರಿಯಲ್ಲ.ಮೀಸಲಾತಿ ಬೇಕು ಎಂದು ನಂಬುವಂತೆ ನಮ್ಮನ್ನು ಭ್ರಮೆಗೊಳಿಸುತ್ತಿದೆ ಎಂದಿದ್ದಾರೆ.
“ಸಾಮಾಜಿಕ ಮತ್ತು ಹಿಂದುಳಿದ ವರ್ಗದ ಲಾಭವನ್ನು ಪಡೆಯುವವರು ಹೇಗಾದರೂ ಉತ್ತಮ ಸ್ಥಾನವನ್ನು ಹೊಂದಿದ್ದಾರೆ. ಈ ತಿದ್ದುಪಡಿ ನಮ್ಮನ್ನು ಭ್ರಮೆಗೊಳಿಸುತ್ತಿದೆ. ನ್ಯಾಯಾಲಯವು ೧೬ (೧) ಮತ್ತು (೪) ಒಂದೇ ಸಮಾನತೆಯ ತತ್ವದ ಅಂಶಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಂದಿನ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸೇರಿದಂತೆ ಹಿರಿಯ ವಕೀಲರ ವಾದವನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ ೨೭ ರಂದು ಇಡಬ್ಲ್ಯುಎಸ್ ಕೋಟಾ ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸಿದೆಯೇ ಎಂಬ ಕಾನೂನು ಪ್ರಶ್ನೆಗೆ ತೀರ್ಪನ್ನು ಕಾಯ್ದಿರಿಸಿತ್ತು ಎಂದು ಸುಪ್ರೀಂಗೆ ಮೊರೆ ಹೋಗಿದ್ದರು.ವಿಚಾರಣೆ ಸಂದರ್ಭದಲ್ಲಿ ಈ ಮೀಸಲಾತಿ ತಿದ್ದುಪಡಿಯನ್ನು ವಿರೋಧಿಸುತ್ತಿರುವ ಅರ್ಜಿದಾರ, ಶಿಕ್ಷಣ ತಜ್ಞ ಮೋಹನ್ ಗೋಪಾಲ್ ತಿದ್ದುಪಡಿಯು ಮೀಸಲಾತಿಯ ಪರಿಕಲ್ಪನೆಯನ್ನು ನಾಶ ಮಾಡಲು ಮೋಸದ ಮತ್ತು ಹಿಂಬಾಗಿಲಿನ ಪ್ರಯತ್ನವಾಗಿದೆ ಎಂದು ವಾದಿಸಿದರು.ಈ ಮೀಸಲಾತಿಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ, ತಿದ್ದುಪಡಿಯನ್ನು ರದ್ದುಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತ್ತು.ಆರ್ಥಿಕ ಮಾನದಂಡಗಳು ಮೀಸಲಾತಿ ವರ್ಗೀಕರಣಕ್ಕೆ ಆಧಾರವಾಗುವುದಿಲ್ಲ ಎಂದು ವಾದ ಮಂಡಿಸಿದ ತಮಿಳುನಾಡು ಈ ಮೀಸಲಾತಿಯನ್ನು ಎತ್ತಿ ಹಿಡಿಯಲು ನಿರ್ಧರಿಸಿದರೆ ಇಂದಿರಾ ಸಾಹ್ನಿ (ಮಂಡಲ) ತೀರ್ಪುನ್ನು ಪುನರ್‌ಪರಿಶೀಲಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.

ಏನಿದು ಪ್ರಕರಣ
ಕೇಂದ್ರ ಸರ್ಕಾರವು ೨೦೧೯ರಲ್ಲಿ ಸಂವಿಧಾನಕ್ಕೆ ೧೦೩ನೇ ತಿದ್ದುಪಡಿ ತಂದು ಈ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿತ್ತು.
ಇದು ಸಂವಿಧಾನಬಾಹಿರ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಎಂದು ಸುಪ್ರೀಂಕೋರ್ಟಿಗೆ ಹಲವರು ಅರ್ಜಿ ಸಲ್ಲಿಸಿದ್ದರು.