ದುರ್ಗಾದೇವಿ ದೇವಸ್ಥಾನದಲ್ಲಿ ಭಂಡಾರ ಪೂಜೆ, ಬುತ್ತಿ ಪೂಜೆ ಸರಳ ಆಚರಣೆ


ಹುಬ್ಬಳ್ಳಿ ನ 9 : ನಗರದ ದಾಜೀಬಾನ್ ಪೇಟೆಯ ಎಸ್. ಎಸ್.ಕೆ. ಪಂಚ ಕಮೀಟಿ ಶ್ರೀ ದುರ್ಗಾದೇವಿ ದೇವಸ್ಥಾನ ವತಿಯಿಂದ ಗ್ರಾಮದೇವತೆ ಎಂದೇ
ಪ್ರಸಿದ್ದಿ ಹೊಂದಿರುವ ಶ್ರೀ ದ್ಯಾಮವ್ವನದೇವಿ ಹಾಗೂ ಶ್ರೀ ದುರ್ಗಾದೇವಿ ಮಾತೆಯರಿಗೆ ‘ಭಂಡಾರ ಪೂಜೆ’ಯನ್ನು ಇತ್ತೀಚಿಗೆ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಜರುಗಿತು.
ತದನಂತರ ಮರುದಿನದಂದು ದೇವಸ್ಥಾನದಲ್ಲಿ “ಬುತ್ತಿಪೂಜೆ” ಕಾರ್ಯಕ್ರಮ ಭಕ್ತಿಯಿಂದ ಜರುಗಿತು.
ಪ್ರತಿ ವರ್ಷವೂ ದಸರಾ ಹಿನ್ನೆಲೆಯಲ್ಲಿ ಶುಕ್ರವಾರ ದಿವಸದಂದು ಭಂಡಾರ ಪೂಜೆಯ ನಿಮಿತ್ಯ ಶ್ರೀ ದೇವಿಯ ಪಲ್ಲಕ್ಕಿ ಸೇವೆ ನಡೆದು 500 ಕ್ಕೂ ಹೆಚ್ಚು ಸುಮಂಗಲೆಯರು ಹಾಗೂ ಹತ್ತು ಸಾವಿರಕ್ಕೂ ಜನರು ಬಂದು ದೇವಿಯ ದರ್ಶನಾರ್ಶಿವಾದ ಪಡೆದು ಪ್ರಸಾದವನ್ನು ಸ್ವೀಕರಿಸಿದ್ದರು. ಈ ಭಾರಿ ಕೋವಿಡ್‍ನಿಂದಾಗಿ ಕೇವಲ 10 ಸುಮಂಗಲೆಯರು ಮತ್ತು 600ಕ್ಕಿಂತ ಕಡಿಮೆ ಜನರು ಆಗಮಿಸಿದ್ದರು.
ನಂತರ ಮರು ದಿವಸ ಅಂದರೆ ಶನಿವಾರ ದಿವಸ ಸಾಯಂಕಾಲ 7 ಘಂಟೆಗೆ ಶ್ರೀ ದೇವಿಯರಿಗೆ “ಬುತ್ತಿ ಪೂಜೆ” ಯ ಸೇವೆ ಜರುಗುವ ಮೂಲಕ ದಸರಾ ಹಬ್ಬದ ಕೊನೆಯ ಹಂತ ನೇರವೇರಿಸಿದಂತಾಗುತ್ತದೆ ಎಂಬುದು ಸಾಂಪ್ರದಾಯಿಕ ಪದ್ದತಿಯಾಗಿದೆ. ಭಂಡಾರ ಪೂಜೆಯ ನೇತೃತ್ವವನ್ನು ಸಂಸ್ಥೆಯ ಚೀಫ್ ಟ್ರಸ್ಟಿ ಜಿ. ಎನ್ ಕಲಬುರ್ಗಿ, ಜಾ. ಚೀಫ್ ಟ್ರಸ್ಟಿ, ನೀಲಕಂಠ ಪಿ.ಜಡಿ, ಗೌರವ ಕಾರ್ಯದರ್ಶಿ ಭಾಸ್ಕರ ಎನ್. ಜಿತೂರಿ, ಗೌರವ ಸಹ – ಕಾರ್ಯದರ್ಶಿ ಟಿ. ಎನ್. ಧೋಂಗಡಿ, ಟ್ರಸ್ಟಿಗಳಾದ ಎ.ಕೆ. ಕಲಬುರ್ಗಿ, ಎನ್. ಆರ್. ಹಬೀಬ, ಎ.ಪಿ. ಪವಾರ ಸೇರಿದಂತೆ ದೇವಸ್ಥಾನದ ಪೂಜಾರಿ ಮನೆತನದವರು, ಯುವಕ ಹಾಗು ಮಹಿಳಾ ಮಂಡಳದ ಪ್ರಮುಖರು ವಹಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಜನಾಂಗದ ದೇವಸ್ಥಾನಗಳಲ್ಲಿ, ವಿಜಯದಶಮಿ ಮುಗಿದ ನಂತರ ದೀಪಾವಳಿ ಹಬ್ಬಕ್ಕಿಂತ ಮುಂಚೆ ಬರುವ ಶುಕ್ರವಾರ ಅಥವಾ ಮಂಗಳವಾರ ದಿವಸ ಭಂಡಾರ ಪೂಜೆಯ ಸೇವೆಯನ್ನು ಭಕ್ತರು ಶ್ರೀದೇವಿ ಜಗನ್ಮಾತೆಗೆ ಸಲ್ಲಿಸಿ, ಶ್ರೀದೇವಿಯು ಯುದ್ಧದಿಂದಾಗಿ ಹೊಂದಿರುವ ಉಗ್ರಾವತಾರಕ್ಕೆ ಶಾಂತಿ ಆಗಲೆಂದು ಪ್ರಾರ್ಥಿಸುವ ನಿಮಿತ್ಯ ಭಂಡಾರ ಪೂಜೆ ಹಾಗೂ ಬುತ್ತಿ ಪೂಜೆ ಮಾಡುವ ಸಂಪ್ರದಾಯವಿದೆ ಎಂದು ಕಮೀಟಿ ಗೌರವ ಕಾರ್ಯದರ್ಶಿ ಭಾಸ್ಕರ್ ಜಿತೂರಿ ತಿಳಿಸಿದ್ದಾರೆ.