ದುರ್ಗಾಂಬಿಕಾ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ

ದಾವಣಗೆರೆ.ಜ.೨; ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಶ್ರೀ ದುರ್ಗಾಂಬಿಕಾ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಸಮಿತಿಯ ಗೌರವಾಧ್ಯಕ್ಷರು, ಶಾಸಕರೂ ಆದ ಡಾ. ಶಾಮನೂರು ಶಿವಶಂಕರಪ್ಪನವರು ಚಾಲನೆ ನೀಡಿದರು. ಸಸಿ ನೆಡಲು ಚಾಲನೆ ನೀಡಿದ ಶಾಮನೂರು ಶಿವಶಂಕರಪ್ಪನವರಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಹನುಮಂತರಾಯ ಅವರು ಸಾಥ್ ನೀಡಿದರು.
ನಂತರ ಮಾತನಾಡಿದ ಡಾ. ಶಾಮನೂರು ಶಿವಶಂಕರಪ್ಪನವರು ಕೊರೋನಾದಿಂದಾಗಿ ಕಳೆದ 9 ತಿಂಗಳಿನಿಂದ ಆರಂಭಗೊಳ್ಳದ ಶಾಲಾ-ಕಾಲೇಜು ಆರಂಭಕ್ಕೆ ಸರ್ಕಾರ ಮಾರ್ಗಸೂಚಿ ನೀಡಿರುವುದು ಸ್ವಾಗತಾರ್ಹವಾಗಿದ್ದು, ಮಕ್ಕಳು, ಶಿಕ್ಷಕರು ಜಾಗೃತೆಯಿಂದ ಇರಬೇಕು. ಇದಕ್ಕೆ ಪೋಷಕರು ಸಹ ಸಹಕಾರ ನೀಡಬೇಕಿದೆ ಎಂದರು.
ಶಾಲಾ-ಕಾಲೇಜು ಆರಂಭವಾಗದೇ ಇರುವುದು ಮಕ್ಕಳ ಮುಂದಿನ ಭವಿಷ್ಯಕ್ಕೆ ಧಕ್ಕೆ ಆಗುತ್ತಿತ್ತು. ಸರ್ಕಾರ ನೀಡಿರುವ ಮಾರ್ಗಸೂಚಿಯಂತೆ ಶಾಲಾ-ಕಾಲೇಜುಗಳನ್ನು ಶಿಕ್ಷಕರು ಜಾಗೃತೆಯಿಂದ ನಡೆಸಿ ಎಂದು ಸಲಹೆ ನೀಡಿದ ಶಾಸಕರು ಹೊಸ ವರುಷ ಎಲ್ಲಾ ಬಾಳನ್ನು ಬೆಳೆಗಿಸುವಂತಾಗಲಿ ಎಂದು ಆಶಿಸಿದರು.ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮಾತನಾಡಿ ದಾವಣಗೆರೆ ಜಿಲ್ಲೆಯಲ್ಲಿ ಎಲ್ಲಾ ಶಾಲಾ-ಕಾಳೇಜುಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಆರಂಭಿಸಲು ಸೂಚಿಸಲಾಗಿದೆ ಎಂದು ತಿಳಿಸಿ ನೂತನ ವರುಷವು ಮಕ್ಕಳ ಭವಿಷ್ಯವನ್ನು ರೂಪಿಸಲಿ ಎಂದು ಆಶಯ ವ್ಯಕ್ತಪಡಿಸಿದರು.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಅವರು ಶಾಲಾ ಮಕ್ಕಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ವಿನಾಯಕ ಪೈಲ್ವಾನ್, ಮಾಜಿ ಸದಸ್ಯ ಶಿವನಳ್ಳಿ ರಮೇಶ್, ಶ್ರೀ ದುರ್ಗಾಂಬಿಕಾದೇವಿ ದೇವಸ್ಥಾನ ಟ್ರಸ್ಟ್ ಧರ್ಮದರ್ಶಿಗಳಾದ ಯಜಮಾನ್ ಮೋತಿ ವೀರಣ್ಣ, ಗೌಡ್ರು ಚನ್ನಬಸಪ್ಪ, ಜೆ.ಕೆ.ಕೊಟ್ರಬಸಪ್ಪ, ಸೊಪ್ಪಿನವರ ಗುರುರಾಜ್, ಹುಮಂತರಾವ್ ಜಾಧವ್, ರಾಮಕೃಷ್ಣ, ಮುಖಂಡರುಗಳು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.