ದುರ್ಗಮ್ಮ   ಸಿಡಿಬಂಡಿ ಮಹೋತ್ಸವ ಅದ್ದೂರಿ ಆಚರಣೆ:ನಾಗೇಂದ್ರ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.01: ಬರುವ ಮಾ.19 ರಂದು ನಡೆಯಲಿರುವ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಸಿಡಿಬಂಡಿ ರಥೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಸೂಚಿಸಿದರು.
 ಶ್ರೀ ಕನಕದುರ್ಗಮ್ಮ ದೇವಸ್ಥಾನದ ಸಿಡಿಬಂಡಿ ಮಹೋತ್ಸವ ಅಂಗವಾಗಿ ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ಅಧಿದೇವತೆಯ ಮಹೋತ್ಸವವನ್ನು ಸಂಪ್ರದಾಯದಂತೆ ಆಚರಣೆಗೆ ಕ್ರಮ ವಹಿಸಬೇಕು. ಶಿಷ್ಟಾಚಾರದಂತೆ ಎಲ್ಲಾರಿಗೂ ಆಹ್ವಾನಿಸಬೇಕು. ರಥ ಚಕ್ರಗಳನ್ನು ಪರಿಶೀಲಿಸಬೇಕು. ಯಾವುದೇ ರೀತಿಯ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದೇವಸ್ಥಾನದ ನೈರ್ಮಲೀಕರಣಕ್ಕೆ ದೇವಸ್ಥಾನದ ಸುತ್ತಲು ಜಾತ್ರಾ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಹಾಗೂ ಕಸದ ವಿಲೇವಾರಿಯ ಕುರಿತು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು.
ರಥೋತ್ಸವ ಕಾರ್ಯಕ್ರಮದಲ್ಲಿ ಸುಮಾರು 3 ರಿಂದ 4 ಲಕ್ಷ ಜನರು ಸೇರುವ ಸಾಧ್ಯತೆ ಇದೆ. ಬರುವ ಸಾರ್ವಜನಿಕರು ಮತ್ತು ಭಕ್ತಾಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ನಿಯೋಜಿಸುವಂತೆ ತಿಳಿಸಿದರು.
ಆರೋಗ್ಯದ ವಿಚಾರ ಸಂಬಂಧಿಸಿದಂತೆ ವೈದ್ಯಾಧಿಕಾರಿಗಳ ತಂಡವನ್ನು ರಚಿಸಿ, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು. ಸಹಾಯವಾಣಿ ಕೇಂದ್ರ ತೆರೆಯಬೇಕು ಎಂದು ಸಂಬಂಧಿಸಿದ ಆಧಿಕಾರಿಗಳಿಗೆ ಸೂಚಿಸಿದರು.
ಅಗ್ನಿಶಾಮಕದಳ ಸೇವೆ, ಸಾರ್ವಜನಿಕರು ಮತ್ತು ಭಕ್ತಾಧಿಗಳಿಗೆ ಸಾಲಿನಲ್ಲಿ ಬಂದು ದೇವಿಯ ದರ್ಶನ ಪಡೆಯಲು ಬ್ಯಾರಿಕೇಡ್ ಮತ್ತು ಸಿಸಿಟಿವಿ ಕ್ಯಾಮೆರಗಳನ್ನು ಆಳವಡಿಸಬೇಕು ಎಂದು ಹೇಳಿದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿ, ಸಿಡಿಬಂಡಿ ರಥೋತ್ಸವದ ಅಂಗವಾಗಿ ನಗರದ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ವ್ಯವಸ್ಥೆ ಮಾಡಬೇಕು.
ದೇವಿಯ ದರ್ಶನಕ್ಕೆ ಬರುವ ವಿಐಪಿ ವ್ಯಕ್ತಿಗಳಿಗೆ ನಿಗದಿತ ಸಮಯ ಮೀಸಲಿರಿಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಸಲಹೆ ನೀಡಿದರು.
@12bc = ಮೋಕಾ ಮುದಿಮಲ್ಲೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ:
ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ಮೋಕಾ ಗ್ರಾಮದ ಮುದಿ ಮಲ್ಲೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವೂ ಮಾ.02 ರಂದು ನಡೆಯಲಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಇದಕ್ಕೆ ಅಗತ್ಯ ಸಿದ್ಧತೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಸೂಚಿಸಿದರು.
ಈ ವೇಳೆ ಮಹಾನಗರ ಪಾಲಿಕೆ ಮೇಯರ್ ಬಿ.ಶ್ವೇತ, ಉಪಮೇಯರ್ ಬಿ.ಜಾನಕಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಸಹಾಯಕ ಆಯುಕ್ತ ಹೇಮಂತ್, ತಹಶೀಲ್ದಾರ ಗುರುರಾಜ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಗಾಣಿಗ ಸಮುದಾಯದವರು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರುಗಳು ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.